ತೆಲಂಗಾಣ ಚುನಾವಣೆ; ಇದುವರೆಗೆ 700 ಕೋಟಿ ನಗದು ವಶ
ಹೈದರಾಬಾದ್; ತೆಲಂಗಾಣ ಚುನಾವಣೆಯಲ್ಲಿ ಝಣಝಣ ಕಾಂಚಣದ ಸದ್ದು ಜೋರಾಗಿದೆ. ಎಲ್ಲೆಡೆ ಚುನಾವಣಾ ಅಕ್ರಮಗಳು ನಡೆದಿವೆ.
ಅಕ್ಟೋಬರ್ 9 ರಂದು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ತೆಲಂಗಾಣ ರಾಜ್ಯದಲ್ಲಿ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ, ಚಿನ್ನ ಮತ್ತು ಇತರ ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರಿ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬುದಕ್ಕೆ ವಶಪಡಿಸಿಕೊಂಡ ಭಾರಿ ಮೊತ್ತದ ಹಣವೇ ಸಾಕ್ಷಿ.
ನವೆಂಬರ್ 25ರಂದೇ ಸುಮಾರು 10 ಕೋಟಿ ರೂ ವಶ ಪಡಿಸಿಕೊಂಡಿವೆ.ಅಕ್ಟೋಬರ್ 9 ಮತ್ತು ನವೆಂಬರ್ 25 ರ ನಡುವೆ ಲೆಕ್ಕಕ್ಕೆ ಸಿಗದ ನಗದು 282.75 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಶನಿವಾರ 39 ಕೋಟಿ ರೂಪಾಯಿ ಮೌಲ್ಯದ 5,117 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳಲ್ಲಿ ವಶಪಡಿಸಿಕೊಂಡ ಒಟ್ಟು ಮದ್ಯದ ಮೌಲ್ಯ 117 ಕೋಟಿ ರೂ.
ಶನಿವಾರ 1.60 ಕೋಟಿ ಮೌಲ್ಯದ 639.5 ಕೆಜಿ ಗಾಂಜಾ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಳೆದ ತಿಂಗಳ ಒಟ್ಟು ಮಾದಕವಸ್ತುಗಳ ಮೌಲ್ಯ 39.48 ಕೋಟಿ ಎಂದು ಅಂದಾಜಿಸಲಾಗಿದೆ.ಅಕ್ಟೋಬರ್ 9 ರಿಂದ ಇಲ್ಲಿಯವರೆಗೆ 186 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರದಂತಹ ಅಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸಿಐ ಹೇಳಿಕೆ ತಿಳಿಸಿದೆ.