ಗುಜರಾತ್ ಸರ್ಕಾರ ಉರುಳಿಸಲು ಪಿತೂರಿ ಮಾಡಿದ್ದ ತೀಸ್ತಾ; ಎಸ್‌ಐಟಿ ಮಾಹಿತಿ
ಅಹಮದಾಬಾದ್; 2002ರ ನರೇಂದ್ರ ಮೋದಿ ನೇತೃತ್ವದ ಆಗಿನ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಗುಜರಾತ್ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ ಹೇಳಿದೆ. ಅಂದಿನ ಕಾಂಗ್ರೆಸ್ ಅಧ್ಯಕ್ಷರ ಸಲಹೆಗಾರರು ಮತ್ತು ರಾಜ್ಯಸಭೆ ಸದಸ್ಯರಾಗಿದ್ದ ಅಹ್ಮದ್ ಪಟೇಲ್ ಅವರ ಆದೇಶದಂತೆ ಈ ದೊಡ್ಡ ಪಿತೂರಿ ನಡೆದಿತ್ತು ಎಂದು ಎಸ್‌ಐಟಿ ಹೇಳಿದೆ.
2002ರ ಗೋಧ್ರಾ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್, ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಮತ್ತು ಮಾಜಿ ಡಿಐಜಿ ಸಂಜೀವ್ ಭಟ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ. ಸೆಟಲ್‌ವಾಡ್ ಮತ್ತು ಇತರರು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವನ್ನು ಹೇಗಾದರೂ ಮಾಡಿ ಅಸ್ಥಿರಗೊಳಿಸಲು ಅಹ್ಮದ್ ಪಟೇಲ್ ಅವರ ಆದೇಶದಂತೆ ಪಿತೂರಿ ನಡೆಸಿದ್ದರು ಎಂದು ಹೇಳಿದೆ.