ಪಂಜಾಬ್ ಸಿಎಂ ಸೋದರಳಿಯನ ಮನೆಯಲ್ಲಿ 4 ಕೋಟಿ ನಗದು ಪತ್ತೆ..!
ಚಂಡಿಗಢ: ಪಂಜಾಬ್ ಚುನಾವಣೆ ಹತ್ತಿರದಲ್ಲಿರುವಾಗಲೇ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಅವರ ಸೋದರಳಿಯ ಭೂಪಿಂಧರ್ ಸಿಂಗ್ ಹಾಗೂ ಅವರ ಆಪ್ತ ಸಂದೀಪ್ ಕುಮಾರ್ ಅವರ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅವರ ಮನೆಯಲ್ಲಿ ನಾಲ್ಕು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಅವರ ಆಪ್ತ ಸಂದೀಪ್ ಕುಮಾರ್ ನಿವಾಸದಲ್ಲಿ ಎರಡು ಕೋಟಿ ರೂಪಾಯಿ ಪತ್ತೆಯಾಗಿದೆ. ಇದರ ಜೊತೆಗೆ ಹಲವು ಆಸ್ತಿಗಳ ದಾಖಲಾತಿಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಒಬ್ಬ ಮುಖ್ಯಮಂತ್ರಿ ಸೋದರಳಿಯನ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ಹೇಳಲಾಗಿದೆ.