NationalPolitics

ಚಾಲಕರ ಮನ್‌ ಕಿ ಬಾತ್‌ ಆಲಿಸಿದ ರಾಹುಲ್‌; ಭಾರತ್‌ ಜೋಡೋ ನಂತರ ಮಾಗಿದ ಕಾಂಗ್ರೆಸ್‌ ನಾಯಕ

ಹರ್ಯಾಣ; ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ವಿರೋಧ ಪಕ್ಷಗಳವರು ಪಪ್ಪು ಎಂದು ಮೂದಲಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಅವರ ನಡೆನುಡಿಗಳನ್ನು ನೋಡಿದರೆ ಎಂತವರೂ ಮಾರುಹೋಗುವ ರೀತಿ ಇದೆ. ಭಾರತ್‌ ಜೋಡೋ ಯಾತ್ರೆಯ ನಂತರ ರಾಹುಲ್‌ ಗಾಂಧಿ ರಾಜಕೀಯವಾಗಿ ಸಾಕಷ್ಟು ಮಾಗಿದಂತೆ ಕಂಡುಬರುತ್ತಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರ ಕಷ್ಟಗಳನ್ನು ಅರಿಯೋ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ, ರಾಹುಲ್‌ ಜನರ ಗಮನ ಸೆಳೆಯುತ್ತಿದ್ದಾರೆ. ವಿರೋಧಿಗಳ ನಿದ್ದೆ ಕದಿಯುತ್ತಿದ್ದಾರೆ.

ಭಾರತ್‌ ಜೋಡೋ ಯಾತ್ರೆ ಸಮಯದಲ್ಲಿ ರಾಹುಲ್‌ ಗಾಂಧಿಯವರು ಸಮಚಿತ್ತವಾಗಿ ಹೆಜ್ಜೆ ಹಾಕಿದ್ದರು. ಮಳೆಯನ್ನೂ ಲೆಕ್ಕಿಸದೆ ಭಾಷಣ ಮಾಡಿದ್ದರು. ಸಾಮಾನ್ಯ ಹಾಗೂ ಬಡ ಜನರನ್ನು ಸಂಪರ್ಕ ಮಾಡಿದ್ದರು. ಅವರೊಂದಿಗೆ ದಿನಗಳನ್ನು ಕಳೆದಿದ್ದರು. ಅವರೊಂದಿಗೆ ಊಟ ಮಾಡಿದ್ದರು. ಇದನ್ನು ರಾಹುಲ್‌ ಹಾಗೆಯೇ ಮುಂದುವರೆಸಿದ್ದಾರೆ. ಅವರ ಮಾತುಗಳಲ್ಲೂ ಪ್ರಬುದ್ಧತೆ ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿಗಳು ಇತ್ತೀಚೆಗೆ ಸಾಕಷ್ಟು ಸಿಗುತ್ತವೆ. ನಿನ್ನೆ ಕೂಡಾ ರಾಹುಲ್‌ ಗಾಂಧಿ ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ಲಾರಿಯೊಂದರಲ್ಲಿ ಪ್ರಯಾಣ ಮಾಡಿ, ಟ್ರಕ್‌ ಚಾಲಕರ ಜೊತೆ ಮಾತುಕತೆ ನಡೆಸುವ ಮೂಲಕ ರಾಹುಲ್‌ ಗಾಂಧಿ ಬಡ ಹಾಗೂ ದುಡಿಯುವ ವರ್ಗದವರ ಮನಮುಟ್ಟಿದ್ದಾರೆ. ರಾಹುಲ್‌ ಗಾಂಧಿ, ಟ್ರಕ್‌ ಚಾಲಕರ ಜೊತೆ ಕುಳಿತು ಅವರ ಮನ್‌ ಕಿ ಬಾತ್‌ನ್ನು ಆಲಿಸಿದ್ದಾರೆ. ಅವರ ಈ ನಡೆ ಈಗ ಸಾಕಷ್ಟು ಚರ್ಚೆಯಾಗುತ್ತಿದೆ.

ಶಿಮ್ಲಾದಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಹಾಗೂ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಕುಟುಂಬದೊಂದಿಗೆ ಸಮಯ ಕಳೆಯಲು ರಾಹುಲ್ ಗಾಂಧಿ ಹೊರಟಿದ್ದರು. ಮಾರ್ಗಮಧ್ಯೆ ಹರಿಯಾಣದ ಸೋನಿಪತ್‌ ಹೆದ್ದಾರಿಯಲ್ಲಿರುವ ಡಾಬಾದಲ್ಲಿ ಟ್ರಕ್ ಡ್ರೈವರ್‌ಗಳನ್ನು ರಾಹುಲ್‌ ಗಾಂಧಿ ಭೇಟಿಯಾಗಿದ್ದಾರೆ. ನಂತರ ಅವರು ಒಂದು ಲಾರಿಯನ್ನು ಹತ್ತಿ ಅಂಬಾಲಾವರೆಗೆ ತೆರಳಿದ್ದಾರೆ. ಚಾಲಕನ ಪಕ್ಕದಲ್ಲೇ ಕುಳಿತುಕೊಂಡು, ಚಾಲಕನ ಕಷ್ಟಸುಖಗಳನ್ನು ವಿಚಾರಿಸಿದ್ದಾರೆ.

ಅಂದಹಾಗೆ, ರಾಹುಲ್‌ ಗಾಂಧಿಯವರು ಕರ್ನಾಟಕ ಚುನಾವಣಾ ಪ್ರಚಾರದ ವೇಳೆಯಲ್ಲೂ ಒಂದಷ್ಟು ಇಂತಹದ್ದೇ ಸರಳತೆಯನ್ನು ಮರೆದಿದ್ದರು. ಮೋದಿ, ಅಮಿತ್‌ ಶಾ ಅವರು ಅದ್ದೂರಿನ ರೋಡ್‌ ಶೋಗಳನ್ನು ನಡೆಸುತ್ತಿದ್ದರೆ, ರಾಹುಲ್‌ ಗಾಂಧಿ ಸೈಲೆಂಟಾಗಿ ಸಾಮಾನ್ಯ ಜನರನ್ನು ಭೇಟಿಯಾಗೋ ಕೆಲಸದಲ್ಲಿ ನಿರತರಾಗಿದ್ದರು. ಅವರು ಬಿಎಂಟಿಸಿ ಬಸ್‌ನಲ್ಲಿ ಸಂಚಾರ ಮಾಡಿ ಸಾಮಾನ್ಯರ ಜೊತೆ ಬೆರೆತರು. ಫುಡ್‌ ಡೆಲಿವರಿ ಬಾಯ್‌ ಜೊತೆ ಬೈಕ್‌ನಲ್ಲಿ ಸಂಚಾರ ಮಾಡಿದರು. ಅವರ ಜೊತೆ ಊಟ ಮಾಡಿ, ಸಮಸ್ಯೆಗಳನ್ನು ಆಲಿಸಿದರು. ಇದೆಲ್ಲಾ ರಾಜಕೀಯ ಉದ್ದೇಶಕ್ಕೇ ಮಾಡುತ್ತಿದ್ದರೂ, ಸಾಮಾನ್ಯ ಜನರನ್ನು ರಾಹುಲ್‌ ಸೆಳೆಯುತ್ತಿರೋದಂತೂ ಸತ್ಯ.

Share Post