ಭೂವಿವಾದ ಹಿನ್ನೆಲೆಯಲ್ಲಿ ಘರ್ಷಣೆ; ಗುಂಡಿಗೆ ನಾಲ್ವರು ಬಲಿ
ಗುರುದಾಸ್‌ಪುರ(ಪಂಜಾಬ್) : ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಭೂಮಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಗುರುದಾಸ್‌ಪುರ ಜಿಲ್ಲೆಯ ಕಹ್ನುವಾನ್ ಬ್ಲಾಕ್‌ನ ಫುಲ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಫುಲ್ರಾ ನಿವಾಸಿ ಸುಖರಾಜ್ ಸಿಂಗ್, ತನ್ನ ಇಬ್ಬರು ಸಹಚರರಾದ ಜಮಾಲ್ ಸಿಂಗ್ ಮತ್ತು ನಿಶಾನ್ ಸಿಂಗ್ ಜೊತೆಗೆ ಬಿಯಾಸ್ ನದಿಯ ಬಳಿಯ ತಮ್ಮ ಜಮೀನಿಗೆ ಹೋಗಿದ್ದರು. ಈ ವೇಳೆ ದಾಸುಯಾ ಗ್ರಾಮದ ನಿರ್ಮಲ್ ಸಿಂಗ್ ನೇತೃತ್ವದಲ್ಲಿ ಮತ್ತೊಂದು ಗುಂಪಿನವರು ಬಂದಿದ್ದಾರೆ. ಎರಡೂ ಗುಂಪುಗಳು ಪರಸ್ಪರ ಗುಂಡು ಹಾರಿಸಿದ್ದು, ಸುಖರಾಜ್ ಸಿಂಗ್, ಜಮಾಲ್ ಸಿಂಗ್ ಮತ್ತು ನಿಶಾನ್ ಸಿಂಗ್ ಸಾವಿಗೀಡಾಗಿದ್ದಾರೆ. ಮತ್ತೊಂದು ಗುಂಪಿನ ಓರ್ವ ವ್ಯಕ್ತಿ ಮೃತಪಟ್ಟರೇ, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.
ಡಿಎಸ್ಪಿ ಕುಲ್ವಿಂದರ್ ಸಿಂಗ್ ವಿರ್ಕ್ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಪ್ರಸ್ತುತ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸುಖರಾಜ್ ಸಿಂಗ್ ಮಾಜಿ ಕಾಂಗ್ರೆಸ್ ಸರಪಂಚ್ ಲವ್ಜಿತ್ ಕೌರ್ ಅವರ ಪತಿ. ಶೂಟೌಟ್‌ಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪ್ರಾಥಮಿಕ ವಿವರಗಳ ಪ್ರಕಾರ, ಎರಡು ಗುಂಪುಗಳು ಭೂ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.