17 ದಿನಗಳ ನಂತರ ಕಾರ್ಮಿಕರ ರಕ್ಷಣೆ; ಮೊಳಗಿದ ಜಯಘೋಷ
ಉತ್ತರಕಾಶಿ; ಉತ್ತರ ಕಾಶಿ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. 17 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಕೊನೆಗೂ ಹೊರತರಲಾಗಿದೆ. 41 ಕಾರ್ಮಿಕರಿಗೆ ಹೂವಿನ ಹಾರ ಹಾಕಿ ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತಿದೆ. ಮೊದಲ ಬ್ಯಾಚ್ ನಲ್ಲಿ ಕಾರ್ಮಿಕರು ಹೊರಬರುತ್ತಿದ್ದಂತೆ ರಕ್ಷಣಾ ತಂಡ ಜಯಘೋಷ ಕೂಗಿದೆ.
ಸುರಂಗದಲ್ಲಿದ್ದ ಕಾರ್ಮಿಕರು 17 ದಿನಗಳ ಹೋರಾಟದ ನಂತರ ಸಾವನ್ನೇ ಗೆದ್ದು ಬಂದಿದ್ದಾರೆ. ಅವರನ್ನು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಹೂವಿನ ಹಾರ ಹಾಕಿ ಬರಮಾಡಿಕೊಳ್ಳುತ್ತಿದ್ದಾರೆ. ಸುರಂಗದಲ್ಲಿದ್ದವರನ್ನು ಸ್ವಾಗತಿಸಿದ ಬಳಿಕ ಎಲ್ಲಾ ಕಾರ್ಮಿಕರಿಗೆ ಮನೋಸ್ಥೈರ್ಯ ತುಂಬಲು ವೈದ್ಯರ ತಂಡ ರೆಡಿಯಾಗಿದೆ. 41 ಕಾರ್ಮಿಕರನ್ನು 41 ಆ್ಯಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸುರಂಗದ ಒಳಗೆ ಇದ್ದು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದಾರೆ.
ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಜಾರ್ಖಂಡ್‌ನ 15, ಬಿಹಾರದ 8 ಕಾರ್ಮಿಕರು, ಅಸ್ಸಾಂ 5, ಉತ್ತರಪ್ರದೇಶದ 5 ಕಾರ್ಮಿಕರು, ಉತ್ತರಾಖಂಡ್ 2 ಮತ್ತು ಪಶ್ಚಿಮ ಬಂಗಾಳದ 2 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದರು.