HealthNational

ನರೇಂದ್ರ ಮೋದಿ ತಾಯಿ, ಶತಾಯುಷಿ ಹೀರಾಬೆನ್‌ ಇನ್ನಿಲ್ಲ

ಅಹಮದಾಬಾದ್;‌ ಎರಡು ದಿನದ ಹಿಂದಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್  ನಿಧನರಾಗಿದ್ದಾರೆ. ಅಹಮದಾಬಾದ್‌ನ  ಯುಎನ್‌ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದ ಹೀರಾಬೆನ್‌ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 
     ಡಿಸೆಂಬರ್‌ 28ರಂದು ಹೀರಾಬೆನ್‌ ಅವರು ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಅಹಮದಾಬಾದ್‌ನಲ್ಲಿ ಯುಎನ್‌ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಯ್ತು. ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿಯವರು ಆಸ್ಪತ್ರೆಗೆ ಧಾವಿಸಿ, ತಾಯಿಯನ್ನು ಭೇಟಿಯಾಗಿದ್ದರು. ವೈದ್ಯರಿಂದ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.
 ವಯೋಸಹಜ ಕಾರಣದಿಂದ ಹೀರಾಬೆನ್‌ ಅವರ ಆರೋಗ್ಯ ನಿನ್ನೆ ಹದಗೆಟ್ಟಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಹೀರಾಬೆನ್‌ ಮೃತಪಟ್ಟಿದ್ದಾರೆ. 
  ಪ್ರಧಾನಿ ಮೋದಿ ಅವರು ಟ್ವೀಟ್‌ ಮೂಲಕ ತಮ್ಮ ತಾಯಿಯ ನಿಧನ ಬಗ್ಗೆ ದುಃಖ ತೋಡಿಕೊಂಡಿದ್ದಾರೆ.  100ನೇ ಹುಟ್ಟುಹಬ್ಬದಂದು ನಾನು ನನ್ನ ತಾಯಿಯನ್ನು ಭೇಟಿಯಾದಾಗ ‘ಶುದ್ಧ ಜೀವನ ನಡೆಸು’ ಎಂದು ಹೇಳಿದ್ದರು ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ತಾಯಿಯ ನಿಧನಕ್ಕೆ ರಾಜಕೀಯ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನ ದುಃಖ ತಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ತಾಯಿಯ ಸಾವು ಯಾರ ಜೀವನದಲ್ಲಿಯೂ ಕೊನೆಯಿಲ್ಲದ ಸಂಕಟವನ್ನು ಉಂಟುಮಾಡುತ್ತದೆ. ಆ ಕೊರತೆಯನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಈ ನೋವಿನ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಕುಟುಂಬಕ್ಕೆ ನನ್ನ ಸಂತಾಪ” ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
Share Post