National

ವಿದ್ಯುತ್‌ ಇಲಾಖೆ ಸಿಬ್ಬಂದಿ ಮುಷ್ಕರ: ಕತ್ತಲಲ್ಲಿ ಚಂಡೀಘಡ ಜನತೆ

ಚಂಡೀಘಡ:   ವಿದ್ಯುತ್ ಇಲಾಖೆ ಸಿಬ್ಬಂದಿ ಮುಷ್ಕರದಿಂದ ಕೇಂದ್ರಾಡಳಿತ ಪ್ರದೇಶವಾದ ಚಂಢೀಘಡದ ಬಹುತೇಕ ಎಲ್ಲ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕಳೆದ 36 ಗಂಟೆಗಳಿಂದ ವಿದ್ಯುತ್ ಸಂಪರ್ಕ ಕಡಿತದಿಂದ ಜನ ತತ್ತರಿಸಿದ್ದಾರೆ. ನೀರು ಪೂರೈಕೆ ಸ್ಥಗಿತಗೊಂಡಿದೆ. ವಿದ್ಯತ್ ದೀಪಗಳು ಉರಿಯದ ಕಾರಣ ಸಂಚಾರ ಅಸ್ತವ್ಯಸ್ತವಾಗಿದೆ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವ ಪರಿಸ್ಥಿತಿ ಉಂಟಾಗಿದೆ ಇದೆ.  ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಚಂಡೀಗಢ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.

ಸರ್ಕಾರ ಹಾಗೂ ಸಿಬ್ಬಂದಿ ನಡುವಿನ ಮಾತುಕತೆ ವಿಫಲವಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ಸಾವಿರಾರು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. 36 ಗಂಟೆ ಕಳೆದರೂ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ಕಡಿತದೊಂದಿಗೆ ಆನ್‌ಲೈನ್ ತರಗತಿಗಳಿಗೂ ಬ್ರೇಕ್‌ ಬಿದ್ದಿದೆ. ಕೋಚಿಂಗ್ ಸಂಸ್ಥೆಗಳನ್ನು ಮುಚ್ಚಲಾಗಿದೆ. ವಿದ್ಯುತ್ ಅಭಾವದಿಂದ ಜನತೆ ಪಡುತ್ತಿರುವ ಪಾಡು ಇಷ್ಟೇ ಅಲ್ಲ. ಫೋನ್‌ಗಳಲ್ಲಿ ಚಾರ್ಜ್ ಇಲ್ಲ, ವಿದ್ಯುತ್ ಇರುವ ಪ್ರದೇಶಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ.

ಮುಷ್ಕರ ನಿರತ ವಿದ್ಯುತ್ ಇಲಾಖೆ ಸಿಬ್ಬಂದಿ ವಿರುದ್ಧ ಎಸ್ಮಾ ಕಾನೂನನ್ನು ಜಾರಿಗೊಳಿಸಿದ್ದಾರೆ. ಆರು ತಿಂಗಳ ಕಾಲ ಮುಷ್ಕರ ನಡೆಸದಂತೆ ನಿಷೇಧ ಹೇರಲಾಗಿದೆ. ಸರ್ಕಾರದ ಈ ಕ್ರಮವನ್ನು ವಿದ್ಯುತ್ ಇಲಾಖೆ ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ. ಕೂಡಲೇ ಸರ್ಕಾರದ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಮುಷ್ಕರ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇದನ್ನು ಸಮೋಟೋ ಕೇಸ್‌ ಅಡಿಯಲ್ಲಿ ಅರ್ಜಿ ಕೈಗೆತ್ತಿಕೊಂಡು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಇದನ್ನು ಕಾನೂನಾತ್ಮಕವಾಗಿ ಬಗೆಹರಿಸಿ ನಗರವಾಸಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಮೂರ್ತಿ ಅಜಯ್ ತಿವಾರಿ ಮತ್ತು ನ್ಯಾಯಮೂರ್ತಿ ಪಂಕಜ್ ಜೈನ್ ಹೇಳಿದರು. ಮುಷ್ಕರ ನಿರತ ನೌಕರರ ಕ್ರಮದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಹಿರಿಯ ಸ್ಥಾಯಿ ವಕೀಲ ಅನಿಲ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಬಿಕ್ಕಟ್ಟು ನೀಗಿಸಲು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಂದ ಅಧಿಕಾರಿಗಳನ್ನು ಕರೆತರುವಂತೆ ಮನವಿ ಮಾಡಿದ್ರು.

ವಿದ್ಯುತ್ ಪೂರೈಕೆಯ ವಿಚಾರದಲ್ಲಿ ಸಾರ್ವಜನಿಕರಗಷ್ಟೇ ಅಲ್ಲ ಆಸ್ಪತ್ರೆಯಲ್ಲಿ ರೋಗಿಗಳಿಗೆ, ನ್ಯಾಯಾಲಯಗಳಲ್ಲಿನ ವರ್ಚುವಲ್ ವಿಚಾರಣೆಗಳಿಗೂ ಸಹ ಅಡ್ಡಿ ಉಂಟಾಯಿತು. ಇಂತಹ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ಸರಿಪಡಿಸಲಾಗದಷ್ಟು ಹಾನಿಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Share Post