NationalPolitics

ರಾಷ್ಟ್ರಪತಿ ಚುನಾವಣೆ; ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಇಂದು ನಾಮಪತ್ರ ಸಲ್ಲಿಕೆ

ನವದೆಹಲಿ; ವಿರೋಧ ಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ  ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಟಿಆರ್‌ಎಸ್ ಕೂಡ ಯಶವಂತ್ ಸಿನ್ಹಾಗೆ ಬೆಂಬಲ ವ್ಯಕ್ತಪಡಿಸಿದೆ. ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಟಿಆರ್ ಎಸ್ ಕೂಡ ನಿರ್ಧರಿಸಿದೆ. ಟಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ಈಗಾಗಲೇ ದೆಹಲಿ ತಲುಪಿದ್ದಾರೆ.

ಸಂಸದರಾದ ನಾಮ ನಾಗೇಶ್ವರ ರಾವ್, ರಂಜಿತ್ ರೆಡ್ಡಿ, ಸುರೇಶ್ ರೆಡ್ಡಿ, ಬೀಬಿ ಪಾಟೀಲ್, ವೆಂಕಟೇಶ್ ನಾಯಕ ಪ್ರಭಾಕರ ರೆಡ್ಡಿ ಕೂಡಾ ದೆಹಲಿಗೆ ಆಗಮಿಸಿದ್ದಾರೆ. ಇವರೆಲ್ಲರೂ ಇಂದು ಟಿಆರ್‌ಎಸ್ ಪರವಾಗಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ.  ಕೆಸಿಆರ್ ಬದಲಿಗೆ ದೆಹಲಿ ತಂಡವನ್ನು ಕೆಟಿಆರ್ ಮುನ್ನಡೆಸುತ್ತಿದ್ದಾರೆ.

ಮಧ್ಯಾಹ್ನ 12.15ಕ್ಕೆ ಚುನಾವಣಾಧಿಕಾರಿಗೆ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಅನೆಕ್ಸ್‌ನಲ್ಲಿ ವಿರೋಧ ಪಕ್ಷದ ನಾಯಕರು ಸಭೆ ಸೇರಲಾಗುತ್ತದೆ. ಈ ವೇಳೆ ನಾಮಪತ್ರಗಳಿಗೆ ಸೂಚಕರು ಸಹಿ ಹಾಕಲಿದ್ದಾರೆ. ಅದಾದ ಬಳಿಕ ವಿಪಕ್ಷ ನಾಯಕರೆಲ್ಲ ಯಶವಂತ್ ಸಿನ್ಹಾ ಅವರೊಂದಿಗೆ ರ್ಯಾಲಿಗೆ ತೆರಳಲಿದ್ದಾರೆ. ಪ್ರತಿಪಕ್ಷಗಳ ನಾಯಕರು ಮಧ್ಯಾಹ್ನ 12 ಗಂಟೆಗೆ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಆಗಮಿಸಲಿದ್ದಾರೆ.

ಸಂಸತ್ ಆವರಣದಲ್ಲಿರುವ ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಮಧ್ಯಾಹ್ನ 12:15 ಕ್ಕೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ಮಧ್ಯಾಹ್ನ 1.15ಕ್ಕೆ ಯಶವಂತ್ ಸಿನ್ಹಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Share Post