ಲಸಿಕೆ ಹಾಕಿಸಿಕೊಳ್ಳಲು ಬಲವಂತ ಮಾಡುವಂತಿಲ್ಲ; ಸುಪ್ರೀಂ ಕೋರ್ಟ್
ನವದೆಹಲಿ; ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಯಾವುದೇ ವ್ಯಕ್ತಿಯನ್ನು ಬಲವಂತ ಮಾಡುವ ಹಾಗಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಪ್ರಸ್ತುತವಿರುವ ಸರ್ಕಾರದ ಕೋವಿಡ್-19 ಲಸಿಕೆ ನೀತಿ ಅನಿಯಂತ್ರಿತವಲ್ಲ. ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ಲಸಿಕೆ ಹಾಕಿಸಿಕೊಳ್ಳದ ಜನರ ಮೇಲೆ ನಿರ್ಬಂಧಗಳನ್ನು ವಿಧಿಸಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವೈ ಅವರಿದ್ದ ದ್ವಿಸದಸ್ಯ ಪೀಠ ಹೇಳಿದೆ.
ಲಸಿಕೆ ಹಾಕಿಸಿಕೊಂಡವರಗಿಂತ ಲಸಿಕೆ ಪಡೆದುಕೊಳ್ಳದವರು ಹೆಚ್ಚು ವೈರಸ್ ಹರಡಲು ಕಾರಣರಾಗುತ್ತಾರೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಗಳ ಕೈಯಲ್ಲಿ ಆಗಿಲ್ಲ. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನೂ ಸರ್ಕಾರಗಳು ಕೋರ್ಟ್‌ಗೆ ಒದಗಿಸಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಡ ಹೇರಬಾರದು ಎಂದು ಕೋರ್ಟ್ ಆದೇಶ ನೀಡಿದೆ.
ಕೋವಿಡ್ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ಮತ್ತು ಪ್ರತಿಕೂಲ ಪರಿಣಾಮಗಳ ಡೇಟಾವನ್ನು ಕೋರಿ ಮತ್ತು ಕೆಲವು ರಾಜ್ಯ ಸರ್ಕಾರಗಳು ಹೊರಡಿಸಿದ ಲಸಿಕೆ ಕಡ್ಡಾಯ ಆದೇಶಗಳನ್ನು ಪ್ರಶ್ನಿಸಿ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ನ ಮಾಜಿ ಸದಸ್ಯ ಜಾಕೋಬ್ ಪುಲಿಯೆಲ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿತು. ಪುಲಿಯೆಲ್ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.