105 ಗಂಟೆಯಲ್ಲಿ 75 ಕಿಮೀ ರಸ್ತೆ ನಿರ್ಮಾಣ; ವಿಶ್ವ ದಾಖಲೆ
ನವದೆಹಲಿ: ಕೇವಲ 105 ಗಂಟೆಗಳ ಅವಧಿಯಲ್ಲಿ ದಾಖಲೆಯ 75 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಿನ್ನಿಸ್ ದಾಖಲೆ ಸೇರಿದೆ. ಭಾರತ ಸ್ವತಂತ್ರವಾಗಿ 75 ವರ್ಷಗಳ ಸ್ಮರಣಾರ್ಥ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ‘ಆಜಾದಿ ಕಾ ಅಮೃತ್ ಮಹೋತ್ಸವ’ ಘೋಷಣೆಯ ಭಾಗವಾಗಿ ನಡೆದ ಈ ಕಾಮಗಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ವಿಶ್ವ ದಾಖಲೆ ಬರೆದಿದೆ.
ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದಲೇ ಮಹಾರಾಷ್ಟ್ರದ ಅಮರಾವತಿ-ಅಕೋಲಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸ ನಡೆಯುತ್ತಿತ್ತು. ಕೇವಲ 110 ಗಂಟೆಗಳಲ್ಲಿ 75 ಕಿಲೋಮೀಟರ್ ರಸ್ತೆ ನಿರ್ಮಿಸಿ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆಯಲು ಅಧಿಕಾರಿಗಳು ಸರ್ವ ಪ್ರಯತ್ನ ನಡೆಸಿದ್ದರು. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಕಾಮಗಾರಿ ಶುರುವಾಗಿದ್ದು, ಜೂನ್ 7ರ ಸಂಜೆಯೊಳಗೆ ಕೆಲಸ ಪೂರ್ಣಗೊಳಿಸುವ ಗುರಿ ಇತ್ತು. ಅಂತಿಮವಾಗಿ 75 ಕಿಲೋ ಮೀಟರ್ ದೂರದ ರಸ್ತೆಯನ್ನು 105 ಗಂಟೆ 33 ನಿಮಿಷಗಳಲ್ಲಿ ಡಾಂಬರೀಕರಣ ಮಾಡಲಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಾಧಿಕಾರದ ಸಿಬ್ಬಂದಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವದಾಖಲೆ ನಿರ್ಮಾಣಗೊಳ್ಳಲು ಸಹಾಯ ಮಾಡಿರುವ NHAI, ಎಂಜಿನಿಯರ್‌ಗಳು, ಗುತ್ತಿಗೆದಾರರು ಮತ್ತು ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ್ದಾರೆ.