CrimeNational

ಇಡಿ ವಿಚಾರಣೆಗೆ ರಾಹುಲ್‌ ಗಾಂಧಿ ಹಾಜರು; ಮುಂದುವರೆದ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ; ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇವತ್ತೂ ವಿಚಾರಣೆಗೆ ಹಾಜರಾಗಿದ್ದಾರೆ. ಅಬ್ದುಲ್‌ ಕಲಾಂ ರಸ್ತೆಯಲ್ಲಿರುವ ಇಡಿ ಕಚೇರಿಯಲ್ಲಿ ರಾಹುಲ್‌ ಗಾಂಧಿ ವಿಚಾರಣೆ ನಡೆಯುತ್ತಿದೆ. ರಾಹುಲ್‌ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಇವತ್ತೂ ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಸಂಸದ ಡಿ.ಕೆ.ಸುರೇಶ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಸೇರಿ ಹಲವು ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಸಂಸದ ಡಿ.ಕೆ.ಸುರೇಶ್‌ ರಸ್ತೆಯಲ್ಲೇ ಮಲಗಿ ರಂಪಾಟ ಮಾಡಿದ ಘಟನೆ ನಡೆದಿದೆ. 

ಸೋಮವಾರ ಹತ್ತು ಗಂಟೆ ಕಾಲ ವಿಚಾರಣೆ ಮಾಡಲಾಗಿತ್ತು. ನಿನ್ನೆ ಒಟ್ಟು ಒಂಬತ್ತು ಗಂಟೆ ಕಾಲ ವಿಚಾರಿಸಲಾಯಿತು. ಮೊದಲ ದಿನ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದರು. ಯಂಗ್ ಇಂಡಿಯಾ ಮಾಡಿರುವ ಸಾಲಗಳ ಬಗ್ಗೆ ದಾಖಲೆಗಳನ್ನು ತರುವಂತೆ ಸೂಚಿಸಲಾಗಿತ್ತು. ಹೀಗಾಗಿ ಎರಡನೇ ದಿನವಾದ ನಿನ್ನೆ  ರಾಹುಲ್ ಗಾಂಧಿಯವರು ಆ ಸಂಬಂಧ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಒದಗಿಸಿದ್ದರು. ಆ ದಾಖಲೆಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದರು.

ಈ ಎರಡು ದಿನಗಳ ವಿಚಾರಣೆಯಲ್ಲಿ ಹತ್ತಾರು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಅದೆಲ್ಲವನ್ನೂ ಇಡಿ ಅಧಿಕಾರಿಗಳು ಲಿಖಿತ ರೂಪದಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಈವರೆಗೂ ಐವತ್ತು ಪುಟಗಳ ಹೇಳಿಕೆ ನೀಡಿದ್ದು, ಎಲ್ಲ ಪುಟಗಳ ಮೇಲೆ ಇಡಿ ಅಧಿಕಾರಿಗಳು ರಾಹುಲ್‌ ಗಾಂಧಿರಿಂದ ಸಹಿ ಮಾಡಿಸಿಕೊಂಡಿದ್ದಾರೆ.

Share Post