ಸಂಸ್ಕೃತದಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಟಾಪ್; 5 ಚಿನ್ನದ ಪದಕ ಗೆದ್ದ ಉತ್ತರ ಪ್ರದೇಶದ ಯುವತಿ
ಲಖನೌ: ಉತ್ತರ ಪ್ರದೇಶದ ಸ್ನಾತಕೋತ್ತರ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಂಸ್ಕೃತದಲ್ಲಿ ಐದು ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇಲ್ಲಿನ ಲಖನೌ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿ ಗಜಲ ಅವರೇ ಐದು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ. 2021ರಲ್ಲಿ ಚಿನ್ನದ ಪದಕಗಳನ್ನು ಘೋಷಣೆ ಮಾಡಲಾಗಿತ್ತು. ಇಂದು ವಿದ್ಯಾರ್ಥಿನಿ ಗಜಲಗೆ ಪದಕಗಳನ್ನು ಪ್ರದಾನ ಮಾಡಲಾಯಿತು.
ಗಜಲ ದಿನಗೂಲಿ ಕಾರ್ಮಿಕರ ಮಗಳು. ಗಜಲಗೆ ಐದು ಭಾಷೆಗಳು ಗೊತ್ತಿದ್ದು, ಗಜಲ ಹತ್ತನೇ ಓದುತ್ತಿರುವಾಗಲೇ ಅವರ ತಂದೆಯನ್ನು ಕಳೆದುಕೊಂಡಿದ್ದರು. ಆದರೂ ಛಲ ಬಿಡದೇ ವ್ಯಾಸಂಗ ಮಾಡಿ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ. ಗಜಲ ಅವರು ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್ ಹಾಗೂ ಸಂಸ್ಕೃತವನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಮುಸ್ಲಿಂ ಆಗಿ ಸಂಸ್ಕೃತದ ಮೇಲೆ ಆಸಕ್ತಿ ಹೇಗೆ ಬಂತು ಅಂತ ಪ್ರಶ್ನಿಸಿದರೆ ಸಂಸ್ಕೃತ ಎಲ್ಲಾ ಭಾಷೆಗಳಿಗೆ ತಾಯಿ ಎಂದು ಗಜಲ ಹೇಳಿದ್ದಾರೆ.