ಸುದ್ದಿ ವಾಹಿನಿಗಳ ಹಣೆಬರಹ ಬರೆಯೋಕೆ BARCಗೆ ಅನುಮತಿ..!
ನವದೆಹಲಿ: ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿಂದ ನಿಲ್ಲಿಸಲಾಗಿದ್ದ ಟಿಆರ್‌ಪಿಯನ್ನು ತಕ್ಷಣದಿಂದ ಬಿಡುಗಡೆ ಮಾಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಸೂಚಿಸಿದೆ.
ಬಾರ್ಕ್ ಸಂಸ್ಥೆ ಟೆಲಿವಿಷನ್‌ಗಳ ರೇಟಿಂಗ್ ನೀಡುವ ಕೆಲಸ ಮಾಡುತ್ತಿತ್ತು. ಆದರೆ ಸುದ್ದಿ ವಾಹಿನಿಗಳ ರೇಟಿಂಗ್ ನೀಡುವ ವಿಚಾರದಲ್ಲಿ ದುರುಪಯೋಗವಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರೇಟಿಂಗ್ ನೀಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿತ್ತು. ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ರೇಟಿಂಗ್ ನೀಡಲು ಅನುಮತಿ ನೀಡಿದೆ.
ಹೀಗಾಗಿ ಮುಂದಿನ ಈ ವಾರದಿಂದ ಟಿಆರ್‌ಪಿ ಸಿಗಲಿದೆ. ಜೊತೆಗೆ ಕಳೆದ ಮೂರು ತಿಂಗಳ ದತ್ತಾಂಶವೂ ಚಾನಲ್‌ಗಳಿಗೆ ಲಭ್ಯವಾಗಲಿದೆ.
ಟೆಲಿವಿಷನ್ ರೇಟಿಂಗ್ ಪಾಯಿಂಟ್ ಸಮಿತಿ ಈ ಬಗ್ಗೆ ವರದಿಯೊಂದನ್ನು ತಯಾರಿಸಿತ್ತು. ಜೊತೆಗೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಕೂಡಾ ಟಿಆರ್‌ಪಿ ನೀಡಲು ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಎರಡನ್ನೂ ಪರಿಗಣಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಾರ್ಕ್‌ಗೆ ಟಿಆರ್‌ಪಿ ಪ್ರಕಟಿಸಲು ಅನುಮತಿ ನೀಡಿದೆ.