ಇಟ್ಟಿಗೆ ವ್ಯಾಪಾರಿ ಬಾಗಿಲು ತಟ್ಟಿದ ಅದೃಷ್ಟ ದೇವತೆ-ಇಪ್ಪತ್ತು ವರ್ಷಗಳ ತನ್ನ ಪರಿಶ್ರಮಕ್ಕೆ ಸಿಕ್ತು ಪ್ರತಿಫಲ
ಮಧ್ಯಪ್ರದೇಶ: ಅದೃಷ್ಟ ದೇವತೆ ಯಾವಾಗ..ಯಾರ ಮನೆ ಬಾಗಿಲು ತಟ್ಟುತ್ತಾಳೆ ಅಂತ ಯಾರಿಗೂ ಗೊತ್ತಿಲ್ಲ. ಇಲ್ಲೊಬ್ಬ ಇಟ್ಟಿಗೆ ವ್ಯಾಪಾರಿ ಅದೇ ನಂಬಿಕೆಯಿಂದ ಬರೋಬ್ಬರಿ ಇಪ್ಪತ್ತು ವರ್ಷಗಳಿಂದ ಕಾದಿದ್ದಾನೆ. ಆತನ ಇಪ್ಪತ್ತು ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಅದೃಷ್ಟ ದೇವತೆ ಆತನ ಮನೆ ಬಾಗಿಲು ತಟ್ಟಿದ್ದಾಳೆ. ಒಂದು ವಜ್ರ ಇಡೀ ಜೀವನವನ್ನೇ ಬದಲಾಯಿಸುತ್ತೆ ಆದರೆ ಅದು ಎಲ್ಲರ ಬದುಕಿನಲ್ಲೂ ನಡೆಯುವುದಿಲ್ಲ. ಮಧ್ಯಪ್ರದೇಶದ ಪನ್ನಾ ಮೈನ್ಸ್ನಲ್ಲಿ ಒಬ್ಬ ವ್ಯಕ್ತಿ ಇಪ್ಪತ್ತು ವರ್ಷಗಳಿಂದ ವಜ್ರ ಸಿಗುತ್ತೆ ಎಂಬ ಭರವಸೆಯಲ್ಲಿ ಕೆಲಸ ಮಾಡ್ತಿದ್ನಂತೆ. ಇಪ್ಪತ್ತು ವರ್ಷಗಳಿಂದ ಒಂದು ದಿನವೂ ನಿರಾಸೆ ತೋರದೆ ಕೆಲಸ ಮಾಡಿದ್ದಾನೆ.ಅದರ ಪ್ರತಿಫಲವೇ ಆತನನ್ನು ಕೋಟ್ಯಾಧೀಶ್ವರನನ್ನಾಗಿ ಮಾಡಿದೆ.
ಮಧ್ಯಪ್ರದೇಶ ಮೂಲದ ಸುಶೀಲ್ ಶುಕ್ಲಾ ಇಟ್ಟಿಗೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪನ್ನಾ ಮೈನ್ಸ್ ಗುತ್ತಿಗೆ ಪಡೆದುಕೊಂಡು 20 ವರ್ಷಗಳಿಂದ ಅದೇ ಕೆಲಸ ಮಾಡಿಕೊಂಡಿದ್ದಾರೆ. ಕೊನೆಗೆ ಆತನಿಗೆ 1.2 ಕೋಟಿ ಮೌಲ್ಯದ ವಜ್ರ ಸಿಕ್ಕಿದೆ. ಅದು ವಜ್ರ ಎಂದು ತಿಳಿಯುತ್ತಿದ್ದಂತೆ ಆತನ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲಾ ಕೇಂದ್ರದ ಕಿಶೋರ್ ಗಂಜ್ ನಿವಾಸಿ ಸುಶೀಲ್ ಶುಕ್ಲಾ ಅವರು ಇಟ್ಟಿಗೆ ಗೂಡು ವ್ಯಾಪಾರ ಮಾಡಿಕೊಳ್ಳುವುದರ ಜೊತೆಗೆ ಕೃಷ್ಣ ಅವರ ಒಡೆತನದ ಕಲ್ಯಾಣಪುರ ಪ್ರದೇಶದ ಗಣಿಯನ್ನು ಗುತ್ತಿಗೆ ಪಡೆದಿದ್ರು.
ಸೋಮವಾರ ಗಣಿಯಿಂದ ಪತ್ತೆಯಾದ 26.11 ಕ್ಯಾರೆಟ್ ವಜ್ರದ ಮೌಲ್ಯ 1.2 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅದನ್ನು ಹರಾಜು ಹಾಕಿ ಮಾರಾಟದಿಂದ ಬಂದ ಹಣದಿಂದ ರಾಯಲ್ಟಿ ಹೊರತುಪಡಿಸಿ ಉಳಿದ ಹಣವನ್ನು ಪಾವತಿಸುವುದಾಗಿ ಅಧಿಕಾರಿಗಳು ಘೋಷಿಸಿದರು.