ವಿಶ್ವಾಸಮತಕ್ಕೆ ಸುಪ್ರೀಂ ಅಸ್ತು; ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
ಮುಂಬೈ; ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ಬಹುಮತ ಸಾಬೀತುಪಡಿಸುವಂತೆ ಮಹಾ ವಿಕಾಸ್ ಆಘಾಡಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ್ದಾರೆ.
ವಿಶ್ವಾಸಮತ ಸಾಬೀತು ಮಾಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆ ನೀಡಿ ಎಂದು ಶಿವಸೇನಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆದ್ರೆ ಆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ‘ಗುರುವಾರವೇ ವಿಶ್ವಾಸಮತ ಸಾಬೀತುಪಡಿಸಿ’ ಎಂದು ಆದೇಶಿಸಿತು. ಇದರ ಬೆನ್ನಲ್ಲೇ, ಉದ್ಧವ್ ಅವರು ರಾಜೀನಾಮೆ ಘೋಷಿಸಿದ್ದಾರೆ. ಇಂದು ರಾತ್ರಿ ಫೇಸ್‌ಬುಕ್‌ನಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದ್ದಕ್ಕಾಗಿ ರಾಜ್ಯದ ಜನತೆಗೆ, ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನವರಿಗೆ ಕೃತಜ್ಞತೆಯನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
‘ನಾನು ಅನಿರೀಕ್ಷಿತವಾಗಿ ಇಲ್ಲಿಗೆ ಬಂದಿದ್ದೇನೆ ಹಾಗೂ ಈಗ ಅದೇ ರೀತಿಯಲ್ಲಿ ನಿರ್ಗಮಿಸುತ್ತಿದ್ದೇನೆ. ಹಾಗೆಂದು ಶಾಶ್ವತವಾಗಿ ಇಲ್ಲಿಂದ ತೆರಳುವುದಿಲ್ಲ. ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳಲಿದ್ದೇನೆ. ನನ್ನವರೆಲ್ಲರನ್ನು ಒಟ್ಟುಗೂಡಿಸಲಿದ್ದೇನೆ. ಶಿವಸೇನಾ ಮತ್ತೊಮ್ಮೆ ಪುಟಿದೇಳಲಿದೆ. ಮುಖ್ಯಮಂತ್ರಿ ಸ್ಥಾನದ ಜತೆಗೆ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಠಾಕ್ರೆ ಹೇಳಿದರು.