NationalPolitics

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು; ಎಲ್ಲರೂ ಮುಂಬೈಗೆ ಬನ್ನಿ – ಉದ್ಧವ್‌ ಠಾಕ್ರೆ ಮನವಿ

ಮುಂಬೈ; ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಒಂದು ಕಡೆ ಶಿಂಧೆ ನನ್ನ ಬಳಿ ಐವತ್ತು ಶಾಸಕರಿದ್ದಾರೆ ಶೀಘ್ರದಲ್ಲೇ ಮುಂಬೈಗೆ ಬಂದು ಶಕ್ತಿ ಪ್ರದರ್ಶನ ಮಾಡ್ತೀನಿ ಅಂತಿದ್ದಾರೆ. ಇನ್ನೊಂದೆಡೆ ಶಿವಸೇನಾ ಅಧ್ಯಕ್ಷ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂಬೈಗೆ ಮರಳುವಂತೆ ಬಂಡಾಯ ಶಾಸಕರನ್ನು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲರೂ ಗುವಾಹಟಿಯಿಂದ ಮುಂಬೈಗೆ ವಾಪಸ್‌ ಬಂದುಬಿಡಿ. ಏನೇ ಸಮಸ್ಯೆ ಇದ್ದರೂ ಒಟ್ಟಿಗೆ ಎಲ್ಲರೂ ಕುಳಿತುಕೊಂಡು ಮಾತುಕತೆ ಮೂಲಕ ಬಗೆಹರಿಸೋಣ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ದಾರಿಯಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಹಲವು ದಿನಗಳಿಂದ ಇದ್ದಾರೆ. ಇವರ ಬಂಡಾಯದಿಂದಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ಬಿಕ್ಕಟ್ಟು ಶುರುವಾಗಿದೆ. ಸಿಎಂ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಉದ್ಧವ್ ಅವರನ್ನು ಉದ್ದೇಶಿಸಿ ಶಿಂಧೆ ಇಂದು ಬೆಳಗ್ಗೆ ಒಂದು ಸಂದೇಶ ಬಿಡುಗಡೆ ಮಾಡಿದ್ದರು. ನಿಮ್ಮ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನನ್ನು ಹೆಸರಿಸಿ ಎಂದು ಸವಾಲೆಸೆದಿದ್ದರು. ಹೀಗಿರುವಾಗಲೇ ಉದ್ಧವ್‌ ಕೂಡಾ ಒಂದು ಸಂದೇಶ ರವಾನಿಸಿದ್ದಾರೆ.

Share Post