National

FODDER SCAM: ಮೇವು ಹಗರಣದಲ್ಲಿ ಲಾಲೂಗೆ ಮತ್ತೆ ಜೈಲೇ ಗತಿ

ನವದೆಹಲಿ:  ಐದನೇ ಮತ್ತು ಅಂತಿಮ ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌  ಮತ್ತೆ ಜೈಲು ಖಾಯಂ ಆಗಿದೆ. ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಲಾಲೂ ಪ್ರಸಾದ್‌ ಯಾದವ್‌ ಹಾಗೂ ಇತರ 75 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಫೆಬ್ರವರಿ 18 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, ಲಾಲು ಮತ್ತೆ ಜೈಲು ಪಾಲಾಗುತ್ತಿದ್ದಾರೆ.

ಇನ್ನು ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆರು ಮಹಿಳೆಯರು ಸೇರಿ 24 ಮಂದಿ ವಿರುದ್ಧ ಸಾಕ್ಷಾಧಾರಗಳ ಕೊರತೆ ಉಂಟಾಗಿದೆ. ಈ ಕಾರಣ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಲಾಲೂ ಪ್ರಸಾದ್‌ ಯಾದವ್‌ ಹಾಗೂ ಇತರ 75 ಮಂದಿ ವಿರುದ್ಧ ಪ್ರಬಲ ಸಾಕ್ಷ್ಯಗಳಿದ್ದರಿಂದ ಅವರಿಗೆ ಜೈಲು ಶಿಕ್ಷೆ ಖಾಯಂ ಆಗಿದೆ.

ಅವಿಭಜಿತ ಬಿಹಾರದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಮೇವಿನ ಹೆಸರಲ್ಲಿ ಹಣ ಲೂಟಿ ಮಾಡಲಾಗಿತ್ತು. ಸುಮಾರು 950 ಕೋಟಿ ರೂಪಾಯಿ ಹಗರಣ ಇದಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಒಟ್ಟು 170 ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ. ಲಾಲೂ ಪ್ರಸಾದ್‌ ಯಾದವ್‌ ಅವರಲ್ಲದೆ, ಮಾಜಿ ಸಂಸದ ಜಗದೀಶ್ ಶರ್ಮಾ, ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ ಭಗತ್, ಪಶುಸಂಗೋಪನಾ ಕಾರ್ಯದರ್ಶಿ ಬೆಕ್ ಜೂಲಿಯಸ್ ಮತ್ತು ಪಶುಸಂಗೋಪನಾ ಸಹಾಯಕ ನಿರ್ದೇಶಕ ಡಾ.ಕೆ.ಎಂ.ಪ್ರಸಾದ್ ಪ್ರಮುಖ ಆರೋಪಿಗಳು. ಪ್ರಸ್ತುತ 99 ಮಂದಿ ವಿಚಾರಣೆ ಎದುರಿಸುತ್ತಿದ್ದರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ ಸೇರಿದಂತೆ 55 ಆರೋಪಿಗಳು ಸಾವನ್ನಪ್ಪಿದ್ದಾರೆ. ಏಳು ಮಂದಿ ಸರ್ಕಾರಿ ಸಾಕ್ಷಿಯಾಗಿದ್ದರೆ, ಇಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

 

 

Share Post