ನನ್ನ ಪಾಠ ಯಾರೂ ಕೇಳ್ತಿಲ್ಲ; 24 ಲಕ್ಷ ರೂ. ಸಂಬಳ ವಾಪಸ್ ಕೊಟ್ಟ ಪ್ರಾಧ್ಯಾಪಕ
ಪಾಟ್ನಾ; ತನ್ನ ಪಾಠ ಯಾರೂ ಕೇಳುತ್ತಿಲ್ಲ. ಹೀಗಾಗಿ, ನನಗೆ ಕೊಟ್ಟಿರುವ ಸಂಬಳ ಬೇಡ ಎಂದು 24 ಲಕ್ಷ ರೂಪಾಯಿಯನ್ನು ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರೊಬ್ಬರು ವಾಪಸ್ ಮಾಡಿ ಸುದ್ದಿಯಾಗಿದ್ದಾರೆ. ಬಿಹಾರದ ಮುಜಾಫರ್‌ಪುರ್ ನಗರದ ನಿತೀಶ್ವರ್ ಕಾಲೇಜಿನಲ್ಲಿ ಲಲನ್‌ಕುಮಾರ್ ಹಿಂದಿ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಈ ಕಾಲೇಜಿನಲ್ಲಿ 32 ತಿಂಗಳಿಂದ ಕೆಲಸ ಮಾಡುತ್ತಿದ್ದು, ಇವರ ಕ್ಲಾಸಿಗೆ ವಿದ್ಯಾರ್ಥಿಗಳು ಬರುತ್ತಿಲ್ಲವಂತೆ. ಇದ್ರಿಂದ ಬೇಸ್ತತ ಅವರು ತಾವು ತೆಗೆದುಕೊಂಡ ಎಲ್ಲಾ ಸಂಬಳವನ್ನೂ ವಾಪಸ್ ನೀಡಿದ್ದಾರೆ. ಅವರ ಈ ನಿರ್ಧಾರಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮ ಕಾಲೇಜಿನ ಹಿಂದಿ ವಿಭಾಗದಲ್ಲಿ 131 ವಿದ್ಯಾರ್ಥಿಗಳಿದ್ದಾರೆ. ಆದ್ರೆ ಯಾರೊಬ್ಬರೂ ನ್ನ ತರಗತಿಗೆ ಬರುತ್ತಿಲ್ಲ. ಇದರಿಂದ ನಾನು ನನ್ನ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಂಬಳ ಪಡೆಯುವುದು ನೈತಿಕತೆಯಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 24 ಲಕ್ಷ ವೇತನವನ್ನು ನಿತೀಶ್ವರ್ ಮಹಾವಿದ್ಯಾಲಯದ ಕುಲಪತಿಗಳಿಗೆ ವಾಪಸ್ ನೀಡಿದ್ದೇನೆ ಎಂದು ಲಲನ್ ಕುಮಾರ್ ಹೇಳಿದ್ದಾರೆ.
ತರಗತಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ, ನನಗೆ ಬೇರೆ ಕಾಲೇಜಿಗೆ ವರ್ಗಾವಣೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದೆ. ಆದರೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ, 2019 ಸೆಪ್ಟೆಂಬರ್ ತಿಂಗಳಿಂದ 2022ರ ಮೇ ವರೆಗೆ ಪಡೆದ 23,82,238 ರೂಪಾಯಿ ವೇತನದ ಚೆಕ್ ಅನ್ನು ಕುಲಪತಿಗಳಿಗೆ ನೀಡಿದ್ದೇನೆ ಎಂದು ಲಲನ್ ಕುಮಾರ್ ಹೇಳಿದ್ದಾರೆ.