BengaluruPolitics

ವಿದ್ಯಾರ್ಥಿಗಳ ಸಮವಸ್ತ್ರ ವಿಚಾರ; ಶಿಕ್ಷಣ ಸಚಿವ ನಾಗೇಶ್‌ ಹೇಳಿಕೆ ಅಮಾನವೀಯ; ಸಿದ್ದರಾಮಯ್ಯ

ಬೆಂಗಳೂರು; ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನೀಡಿರುವ ಹೇಳಿಕೆ ಅಮಾನವೀಯ. ಅವರ ಮಾತುಗಳು ಬೇಜವಾಬ್ದಾರಿತನ ಹಾಗೂ ಕ್ರೂರತನದಿಂದ ಕೂಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಚುನಾವಣೆಗಳು ಹತ್ತಿರ ಬಂದಂತೆಲ್ಲ ಬಿಜೆಪಿಗೆ ಸುಳ್ಳು ಹೇಳುವ ದೆವ್ವ ಮೈಮೇಲೆ ಹತ್ತಿ ಕುಣಿಯಲಾರಂಭಿಸುತ್ತದೆ. ತಾವು ಮಾತನಾಡಬೇಕಾದರೆ ಕನಿಷ್ಠ ಮಟ್ಟದ ಪ್ರಜ್ಞೆ, ಲಜ್ಜೆ, ನೈತಿಕತೆ ಇವ್ಯಾವುಗಳೂ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಅದರ ಭಾಗವಾಗಿ ಕಲ್ಬುರ್ಗಿಯಲ್ಲಿ ನಿನ್ನೆ ಮಾತನಾಡಿದ್ದಾರೆ.  ಸಚಿವರು ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು, ಶೂ ಸಾಕ್ಸ್ ಹಾಕಿಕೊಳ್ಳುವುದಕ್ಕೆ ಅಲ್ಲ ಎಂದಿದ್ದಾರೆ. ನಾನು ನಾಗೇಶ್ ಅವರನ್ನು ಕೇಳಬಯಸುತ್ತೇನೆ, ನಿಮ್ಮ ಮಕ್ಕಳಾಗಲಿ ಅಥವಾ ನೀವಾಗಲಿ ಎಂದಾದರೂ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡಿದ ಅನುಭವ ಇದೆಯೆ, ಅದರ ಅವಮಾನ, ಕೀಳರಿಮೆಗಳನ್ನು ಅನುಭವಿಸಿದ ಉದಾಹರಣೆಗಳಿವೆಯೆ? ಎಂದು ಪ್ರಶ್ನಿಸಿದ್ದಾರೆ.

ಕಾನ್ವೆಂಟ್ ಸ್ಕೂಲಿಗೆ ಹೋಗುವ ಮಕ್ಕಳು ಶುಭ್ರ ಬಟ್ಟೆ, ಟೈ, ಕಾಲಿಗೆ ಶೂ, ಸಾಕ್ಸ್ ಹಾಕಿಕೊಂಡು ನಡೆದಾಡುವುದನ್ನು ನೋಡಿದಾಗ ಅದೇ ಬೀದಿಯಲ್ಲಿ, ಅದೇ ಹಳ್ಳಿಯಲ್ಲಿ ಆಟವಾಡುವ ಬಡವರ ಮಕ್ಕಳು ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿದ್ದರೆ ನಿಮಗೆ ಏನೂ ಅನ್ನಿಸುವುದಿಲ್ಲವೆ? ಅಥವಾ ಆ ಕಷ್ಟದಲ್ಲಿರುವ ಮಕ್ಕಳಿಗೆ ಏನನ್ನಿಸುತ್ತದೆ ಎಂಬ ಅರಿವಾದರೂ ಇದೆಯೆ ನಿಮಗೆ? ಅವರು ಹಾಗೆಯೇ ಬರಿಗಾಲಿನಲ್ಲಿ ಇರಬೇಕೆಂದು ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುವ ಸಂಘ ನಿಮಗೆ ಹೇಳಿಕೊಟ್ಟಿದೆಯೆ? ಹೇಳಿಕೊಟ್ಟಿರಲು ಸಾಧ್ಯವಿದೆ ಎಂಬ ಅನುಮಾನವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

 

Share Post