ಎಐಸಿಸಿ ಅಧ್ಯಕ್ಷರ ಚುನಾವಣೆ; ಖರ್ಗೆ ಸೇರಿ ಮೂವರು ಕಣದಲ್ಲಿ
ನವದೆಹಲಿ; ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ತಿರುವನಂತಪುರ ಸಂಸದ ಶಶಿ ತರೂರ್ ಮತ್ತು ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಉಳಿದಿದ್ದಾರೆ.
ಹೈಕಮಾಂಡ್‌ನಿಂದ ಬೆಂಬಲ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಗೆಲ್ಲುವ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ. ಖರ್ಗೆ ಅವರು ನಾಮಪತ್ರ ಸಲ್ಲಿಕೆ ವೇಳೆ ನಾಯಕರ ದೊಡ್ಡ ದಂಡೇ ಎಐಸಿಸಿ ಕಚೇರಿಯಲ್ಲಿ ನೆರೆದಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ಜಿ–23 ಬಣದ ಆನಂದ್ ಶರ್ಮಾ, ಪೃಥ್ವಿರಾಜ್ ಚವಾಣ್, ಮನೀಶ್ ತಿವಾರಿ ಮತ್ತು ಭೂಪಿಂದರ್ ಹೂಡಾ ಮುಂತಾದವರು ಅವರ ಜೊತೆಗಿದ್ದರು..
ಜಿ23 ಬಣದಲ್ಲಿ ಗುರುತಿಸಿಕೊಂಡಿರುವ ಸಂಸದ ಶಶಿ ತರೂರ್ ಸಹ 5 ಸೆಟ್ ನಾಮಪತ್ರ ಸಲ್ಲಿಸಿದರು. ಇನ್ನು, ಜಾರ್ಖಂಡ್‌ನ ಮಾಜಿ ಸಚಿವ ತ್ರಿಪಾಠಿ ಒಂದು ಸೆಟ್ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಮಿಸ್ತ್ರಿ, ತ್ರಿಪಾಠಿ ಅವರ ಜೊತೆಗಿದ್ದರು. ‘ಈ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಹಲವು ನಾಯಕರು, ಪಕ್ಷದ ಕಾರ್ಯಕರ್ತರು ಮತ್ತು ಪ್ರಮುಖ ರಾಜ್ಯಗಳ ನಿಯೋಗಗಳಿಂದ ಪ್ರೋತ್ಸಾಹ ಸಿಕ್ಕಿದೆ. ನಾಮಪತ್ರ ಸಲ್ಲಿಸುವ ವೇಳೆ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ’ಎಂದು ಖರ್ಗೆ ಹೇಳಿದರು.
‘ನಾನು ಸದಾ ಹೋರಾಟಗಾರ, ನನ್ನ ಬಾಲ್ಯದಿಂದಲೂ ನಾನು ನಂಬಿರುವ ಕಾಂಗ್ರೆಸ್‌ನ ಆದರ್ಶಗಳನ್ನು ಎತ್ತಿಹಿಡಿಯಲು ಮತ್ತಷ್ಟು ಹೋರಾಟ ಮಾಡಲು ಸಿದ್ಧನಿದ್ದೇನೆ’ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಭೀಷ್ಮ ಪಿತಾಮಹ’ಎಂದು ಕರೆದಿರುವ 66 ವರ್ಷದ ಶಶಿ ತರೂರ್, ಪಕ್ಷದ ಅಧ್ಯಕ್ಷರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೂಲಕ ಆಯ್ಕೆ ಮಾಡುತ್ತಿರುವ ಏಕೈಕ ಪಕ್ಷವಾದ ಕಾಂಗ್ರೆಸ್‌ನ ಅಧ್ಯಕ್ಷಗಾದಿಗೆ ಸ್ಪರ್ಧಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
‘ಇದು ಸ್ನೇಹಯುತ ಸ್ಪರ್ಧೆಯಾಗಲಿದ್ದು, ನಾವು ಶತ್ರುಗಳಲ್ಲ. ಖರ್ಗೆ ಅವರಿಗೆ ಯಾವುದೇ ಅಗೌರವ ತೋರುತ್ತಿಲ್ಲ. ನನ್ನ ಚಿಂತನೆಗಳನ್ನು ಮುಂದಿಡುತ್ತಿದ್ದೇನೆ’ಎಂದು ತರೂರ್ ಹೇಳಿದರು. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್‌ನ 9,100ಕ್ಕೂ ಅಧಿಕ ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಅಕ್ಟೋಬರ್ 17ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19ಕ್ಕೆ ಫಲಿತಾಂಶ ಹೊರಬೀಳಲಿದೆ.