National

ಭ್ರಷ್ಟಾಚಾರ ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆ ಮೇಲೆ ಸತತ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇದೇ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಮುಂದಿರುವ ಎರಡು ದೊಡ್ಡ ಸವಾಲುಗಳೆಂದರೆ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ. ಇವುಗಳ ವಿರುದ್ಧದ ಹೋರಾಟದಲ್ಲಿ ನಾನು ಎಲ್ಲಾ ಭಾರತೀಯರ ಬೆಂಬಲವನ್ನು ಕೋರುತ್ತೇನೆ ಎಂದರು. ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶವು ಅದರ ವಿರುದ್ಧ ಹೋರಾಡಬೇಕಾಗಿದೆ ಎಂದು ಕರೆ ನೀಡಿದರು.

ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿನ ನಮ್ಮ ಅದ್ಭುತ ಪ್ರದರ್ಶನವು, ಭಾರತದ ಮಿನುಗುವ ಪ್ರತಿಭೆಗೆ ಉದಾಹರಣೆಗಳಾಗಿವೆ. ನಾವು ಅಂತಹ ಪ್ರತಿಭೆಗಳನ್ನು ಉತ್ತೇಜಿಸಬೇಕು. ದೇಶವನ್ನು ಲೂಟಿ ಮಾಡಿದರಿಂದಲೇ, ದೇಶಕ್ಕೆ ಮರುಪಾವತಿ ಮಾಡಿಸುವ ನಿಟ್ಟಿನಲ್ಲೇ ನಮ್ಮ ಪ್ರಯತ್ನ ನಡೆದಿದೆ. ಕೋಟಿ ಸಮಸ್ಯೆಗಳಿದ್ದರೂ, ಕೋಟಿ ಪರಿಹಾರಗಳಿವೆ. 130 ಕೋಟಿ ಜನರು ಒಂದು ಹೆಜ್ಜೆ ಮುಂದಿಟ್ಟರೆ, ದೇಶವು 130 ಕೋಟಿ ಹೆಜ್ಜೆಗಳನ್ನು ಮುಂದಕ್ಕಿಟ್ಟಂತೆ ಎಂದು ಮೋದಿ ಹೇಳಿದರು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆರಂಭವಾಗಿದೆ. ಅದರ ಫಲಿತಾಂಶಕ್ಕಾಗಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಾಗಿದೆ. ಇದೇ ‘ಟೀಮ್ ಇಂಡಿಯಾ’ಗೆ ಕರೆ ಎಂದು ಮೋದಿ ಹೇಳಿದ್ದಾರೆ.
2047 ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ನಾಗರಿಕರು 5 ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಅಭಿವೃದ್ಧಿ ಹೊಂದಿದ ಭಾರತ, ದಾಸ್ಯದ ಸಂಕೇತಗಳನ್ನು ತೊಡೆದುಹಾಕುವುದು, ಪರಂಪರೆಯಲ್ಲಿ ಹೆಮ್ಮೆ ಹೊಂದುವುದು, ಏಕತೆ ಮತ್ತು ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದೇ ಆ ಐದು ಪ್ರತಿಜ್ಞೆಗಳು ಎಂದು ಮೋದಿ ಹೇಳಿದರು. ಮಹತ್ವಾಕಾಂಕ್ಷೆ, ನವೋದಯ ಮತ್ತು ವಿಶ್ವದ ನಿರೀಕ್ಷೆ ಎಂಬ ‘ತ್ರಿಶಕ್ತಿ’ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಕೋವಿಡ್‌ ವಿರುದ್ಧ ಹೋರಾಡಲು ನಾಗರಿಕರು ಒಗ್ಗೂಡಿದ್ದರು. ವೈದ್ಯರನ್ನು ಬೆಂಬಲಿಸುವುದರಿಂದ ಹಿಡಿದು ದೂರದ ಭಾಗಗಳಿಗೆ ಲಸಿಕೆಗಳನ್ನು ತಲುಪಿಸುವವರೆಗೆ ನಾವು ಸಾಂಕ್ರಾಮಿಕದ ವಿರುದ್ಧ ಒಟ್ಟಾಗಿ ಹೋರಾಡಿದ್ದೇವೆ ಎಂದು ಅವರು ತಿಳಿಸಿದರು.

Share Post