NationalPolitics

ದೆಹಲಿಯಲ್ಲಿಂದು ಕೈ ಅಂಗಳದಲ್ಲಿ ಹೈ ವೋಲ್ಟೇಜ್‌ ಮೀಟಿಂಗ್‌

ನವದೆಹಲಿ; ಇವತ್ತು ದೆಹಲಿಯಲ್ಲಿ ರಾಜ್ಯ ನಾಯಕರ ಜೊತೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಹೈ ವೋಲ್ಟೇಜ್‌ ಮೀಟಿಂಗ್‌ ಮಾಡಲಿದ್ದಾರೆ. ಮೂರು ಹಂತಗಳಲ್ಲಿ ಸಭೆಗಳು ನಡೆಯಲಿವೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಇದು ಮಹತ್ವವೆನಿಸಿದೆ. ನಿನ್ನೆಯೇ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ದೆಹಲಿಯತ್ತ ಮುಖ ಮಾಡಿದ್ದಾರೆ.

ಶಾಸಕರು, ಹಿರಿಯ ನಾಯಕರು, ಸಚಿವರು, ಸಂಸದರನ್ನು ಕೂಡಾ ದೆಹಲಿಗೆ ಕರೆಸಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅತಿಹೆಚ್ಚು ಸ್ಥಾನ ಬರುವಂತೆ ಮಾಡಲು ಈ ಮೀಟಿಂಗ್‌ನಲ್ಲಿ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಸದ್ಯ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಸಂಸದರಿದ್ದಾರೆ. ಆದ್ರೆ ಈ ಬಾರಿ 25ಕ್ಕೂ ಹೆಚ್ಚು ಸೀಟು ಗೆಲ್ಲಬೇಕೆಂದು ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕರಿಗೆ ಟಾಸ್ಕ್‌ ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಲೋಕಸಭೆಗೆ ಸಮರ್ಥವಾಗಿ ವಾದ ಮಂಡಿಸುವ ನಾಯಕರನ್ನು ಆರಿಸಿ ಕಳುಹಿಸಬೇಕೆಂದು ಕಾಂಗ್ರೆಸ್‌ ನಾಯಕರು ತೀರ್ಮಾನ ಮಾಡಿದ್ದಾರೆ. ಈ ಹಿನ್ನೆಯಲ್ಲಿ ರಾಜ್ಯದಲ್ಲಿ ಸಮರ್ಥರಿರುವ ಇಂಗ್ಲೀಷ್‌, ಹಿಂದಿ ಭಾಷೆ ಗೊತ್ತಿರುವ ಹಾಗೂ ಸಮರ್ಥವಾಗಿ ವಾದ ಮಂಡಿಸುವ ಶಕ್ತಿ ಇರುವವರನ್ನು ಲೋಕಸಭೆ ಅಖಾಡಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ರಾಜ್ಯ ಸರ್ಕಾರದಲ್ಲಿರುವ ಹಾಲಿ ಸಚಿವರು, ಶಾಸಕರನ್ನು ಕೂಡಾ ಲೋಕಸಭೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯದ ಸಚಿವರು, ಶಾಸಕರನ್ನು ಕೂಡಾ ದೆಹಲಿಗೆ ಕರೆಸಲಾಗಿದೆ. ಈ ಬಗ್ಗೆ ಇಂದು ನಡೆಯುವ ಮೂರು ಹಂತದ ಸಭೆಗಳಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನು ಕಾಂಗ್ರೆಸ್‌ ಚುನಾವಣೆ ಸಮಯದಲ್ಲಿ ನೀಡಿರುವ ಗ್ಯಾರೆಂಟಿಗಳು ಜಾರಿಯಾಗಿವೆ. ಅವು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿವೆ. ಫಲಾನುಭವಿಗಳಿಗೆ ಇದರಿಂದ ಯಾವ ಅನುಕೂಲವಾಗಿದೆ. ಇದನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮರ್ಥವಾಗಿ ಜನರಿಗೆ ತಲುಪಿಸಿ, ಇದರಿಂದ ಆಗುತ್ತಿರುವ ಅನುಕೂಲಗಳನ್ನು ತಿಳಿಸಿ, ಮತಗಳಾಗಿ ಪರಿವರ್ತಿಸಿಕೊಳ್ಳುವ ಬಗ್ಗೆಯೂ ಈ ಮೀಟಿಂಗ್‌ನಲ್ಲಿ ಚರ್ಚೆ ನಡೆಯಲಿದೆ.

Share Post