NationalPolitics

8-10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಬದಲಾವಣೆ?

ನವದೆಹಲಿ; ಒಂದು ಕಡೆ ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆಗೆ ರಣತಂತ್ರಗಳನ್ನು ಹೆಣೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ಕೂಡಾ ನಾನಾ ತಂತ್ರಗಾರಿಕೆ ನಡೆಸೋದಕ್ಕೆ ಶುರುವಾಗಿದೆ. ಹಾಗೆ ನೋಡಿದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ 25 ಸಂಸದರು ಬಿಜೆಪಿಯವರೇ ಆಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಕೂಡಾ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದರಿಂದ ಸೀಟು ಕಡಿಮೆಯಾಗಬಹುದು ಎಂಬ ಭೀತಿ ಬಿಜೆಪಿ ನಾಯಕರಿಗೆ ಇದ್ದೇ ಇದೆ. ಹೀಗಾಗಿ, ರಾಜ್ಯದಲ್ಲಿ ಹಾಲಿ ಇರುವ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ಬಿಜೆಪಿ ಹೈಕಮಾಂಡ್‌ ಗಂಭೀರ ಚಿಂತನೆ ನಡೆಸಿದೆ. ಇದರ ಭಾಗವಾಗಿ, ರಾಜ್ಯದ ಎಂಟರಿಂದ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಇರುವ ಸಂಸದರಿಗೆ ಬದಲಾಗಿ ಹೊಸಬರಿಗೆ ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಹೈಕಮಾಂಡ್‌ ಬಿ.ಎಲ್‌.ಸಂತೋಷ್‌ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಚಾಮರಾಜನಗರ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಬೆಂಗಳೂರು ಉತ್ತರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸಬರು ಹಾಗೂ ಉತ್ಸಾಹಿ ಯುವ ನಾಯಕರನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ. ಹೀಗಾಗಿ ಈ ತಿಂಗಳೊಳಗೆ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಮಾಡಬೇಕು. ಸಂಭಾವಿತ ಅಭ್ಯರ್ಥಿಗಳನ್ನು ಪಟ್ಟಿ ಮಾಡಬೇಕು ಎಂದು ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿಗೆ ಸಂದೇಶ ರವಾನಿಸಿದೆ ಎಂದು ತಿಳಿದುಬಂದಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ ಪ್ರಸಾದ್‌ ಅವರು ಹಾಲಿ ಸಂಸದರಿದ್ದಾರೆ. ಅವರಿಗೆ ವಯಸ್ಸಾಗಿದೆ. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದು ಅವರೇ ಹೇಳಿದ್ದಾರೆ ಕೂಡಾ. ಈ ಹಿನ್ನೆಲೆಯಲ್ಲಿ ಇಲ್ಲಿ ಬೇರೊಬ್ಬ ಹೊಸಮುಖವನ್ನು ಪರಿಚಯಿಸಲು ಬಿಜೆಪಿ ಚಿಂತನೆ ಮಾಡಿದೆ. ಇನ್ನು ತುಮಕೂರು ಕ್ಷೇತ್ರದಲ್ಲಿ ಜಿ.ಎಸ್‌.ಬಸವರಾಜು ಅವರು ಹಾಲಿ ಸಂಸದರಿದ್ದಾರೆ. ಅವರಿಗೂ ಕೂಡಾ ವಯಸ್ಸಾಗಿದೆ. ಅವರಿಗೂ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಬಿ.ಎನ್‌.ಬಚ್ಚೇಗೌಡ ಅವರು ಕೂಡಾ ವಯಸ್ಸಾದ ಕಾರಣ ಈಗಾಗಲೇ ಕ್ಷೇತ್ರದಲ್ಲಿ ಅಷ್ಟೇ ಕಾಣಿಸಕೊಳ್ಳುತ್ತಿಲ್ಲ. ಜೊತೆ ಅವರ ಮಗ ಕಾಂಗ್ರೆಸ್‌ ಶಾಸಕರಾಗಿರುವುದರಿಂದ ಬಚ್ಚೇಗೌಡರು ಬಿಜೆಪಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಇನ್ನೊಂದೆಡೆ ದಾವಣಗೆರೆಯಲ್ಲಿ ಜಿ.ಎಂ.ಸಿದೇಶ್ವರ್‌ ಅವರಿಗೆ ಕೂಡಾ ವಯಸ್ಸಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಾ ಬದಲಿಸಿ ಬೇರೊಬ್ಬರಿಗೆ ಟಿಕೆಟ್‌ ನೀಡೋದಕ್ಕೆ ಬಿಜೆಪಿ ಚಿಂತನೆ ಮಾಡ್ತಾ ಇದೆ. ಇತ್ತ ಉತ್ತರ ಕನ್ನಡದಲ್ಲಿ ಅನಂತ್‌ಕುಮಾರ್‌ ಹೆಗ್ಡೆಯವರು ಹಾಲಿ ಸಂಸದರಿದ್ದು, ಅನಾರೋಗ್ಯದ ಕಾರಣದಿಂದಾಗಿ ಅವರು ಕೂಡಾ ರಾಜಕಾರಣದಿಂದ ದೂರವೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಅಲ್ಲೂ ಕೂಡಾ ಹೊಸ ಅಭ್ಯರ್ಥಿ ಬೇಕಾಗಿದೆ. ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿರುವ ಸದಾನಂದಗೌಡರು ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರಿಗೂ ಈ ಬಾರಿ ಟಿಕೆಟ್‌ ನಿರಾಕರಿಸೋದು ಪಕ್ಕಾ. ಹೀಗಾಗಿ ಈ ಕ್ಷೇತ್ರಕ್ಕೂ ಹೊಸ ಅಭ್ಯರ್ಥಿಯನ್ನು ಹುಡುಕೋ ಸಾಹಸಕ್ಕೆ ಬಿಜೆಪಿ ಕೈಹಾಕಿದೆ.

ಅಭ್ಯರ್ಥಿಗಳು ಬದಲಾವಣೆ ಮಾಡಿದರೂ ಕೂಡಾ ಆ ಕ್ಷೇತ್ರಗಳಲ್ಲಿ ಗೆಲ್ಲೋ ವಾತಾವರಣ ಇರಬೇಕು. ಅಂತಹ ಅಭ್ಯರ್ಥಿಗಳನ್ನು ಹುಡುಕುವಂತೆ ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ಸೂಚನೆ ಕೊಟ್ಟಿದೆ ಎನ್ನಲಾಗಿದೆ.

Share Post