ದಂಪತಿ ಬೆಂಕಿಗಾಹುತಿ: ರಸ್ತೆಯಲ್ಲಿ ಬಿದ್ದು ನರಳಾಟ
ಕೊಲ್ಕತ್ತಾ: ಅಚಾನಕ್ ಆಗಿ ಬೆಂಕಿ ಹೊತ್ತಿಕೊಂಡು ರಸ್ತೆಯಲ್ಲಿ ದಂಪತಿ ಬಿದ್ದು ನರಳಾಡಿರುವ ಘಟನೆ ಕೊಲ್ಕತ್ತಾದ ನ್ಯೂಟೌನ್ ಘುನಿ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ ಆದ್ರೆ ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಆ ದಂಪತಿ ಕಲೆದ ನಾಲ್ಕು ವರ್ಷಗಳಿಂದ ಅಪಾರ್ಟ್ಮೆಂಟ್ನಲ್ಲಿ ವಾಸ ಮಾಡ್ತಿದ್ದರಂತೆ. ಇದ್ದಕ್ಕಿದ್ದಂತೆ ಕಿರುಚಾಡುತ್ತಾ ದಂಪತಿ ರಸ್ತೆಗೆ ಬಂದಿದ್ದಾರೆ. ಮೈತುಂಬಾ ಬೆಂಕಿ ಹೊತ್ತಿಕೊಂಡು ನರಳಾಡುತ್ತಿದ್ದ ದಂಪತಿಯನ್ನಯ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರ್ಜಿ ಕರ್ ಆಸ್ಪತ್ರೆ ಯಲ್ಲಿ ಪತಿ ಗೋಲಂ ಮೊರ್ತಾಜಾ ಮತ್ತು ಪತ್ನಿ ಶಕೀಲಾ ಸುಲ್ತಾನಾ ಇಬ್ಬರಿಗೂ ಚಿಕಿತ್ಸೆ ನೀಡಲಾಗ್ತಿದೆ. ಇಬ್ಬರಿಗೂ ಬೆಂಕಿ ಹೇಗೆ ಹೊತ್ತಿಕೊಂಡಿತು? ಇದು ಆಕಸ್ಮಿಕವೇ ಅಥವಾ ಆತ್ಮಹತ್ಯೆಯ ಪ್ರಯತ್ನವೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಅಂತಾರೆ ಪೊಲೀಸರು. ಆದರೆ ಅಡುಗೆ ಮಾಡುವಾಗ ಈ ಅವಘಡ ಸಂಭವಿಸಿರಬಹುದು. ಪತ್ನಿಯನ್ನು ರಕ್ಷಿಸಲು ಹೋದಾಗ ಪತಿಗೂ ಬೆಂಕಿ ಆವರಿಸಿದೆ. ಕೂಡಲೇ ಸಹಾಯಕ್ಕಾಗಿ ಅಪಾರ್ಟ್ಮೆಂಟ್ನಿಂದ ಆಚೆ ಬಂದಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಬೆಂಕಿ ದುರಂತದಲ್ಲಿ ದಂಪತಿಗೆ ಗಂಭೀರವಾದ ಸುಟ್ಟು ಗಾಯಗಳಾಗಿವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅವರಿಗೆ ಪ್ರಜ್ಞೆ ಬಂದರಷ್ಟೇ ಘಟನೆ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ. ಘಟನೆ ಸಂಬಂಧ ಇಕೋ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.