ಮೊದಲ ಏಳೂ ಪಂದ್ಯಗಳಲ್ಲಿ ಸೋತ ಕುಖ್ಯಾತಿ ಗಳಿಸಿದ ಮುಂಬೈ ಇಂಡಿಯನ್ಸ್
ಮುಂಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಭಾರಿ ಕುಖ್ಯಾತಿ ಗಳಿಸಿದೆ. ಐಪಿಎಲ್ ಟೂರ್ನಿಯೊಂದರಲ್ಲಿ ಆಡಿದ ಮೊದಲ ಏಳು ಪಂದ್ಯಗಳಲ್ಲಿಯೂ ಸೋಲು ಕಂಡ ಮೊದಲ ತಂಡ ಎನಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗುರುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂರು ವಿಕೆಟ್ ಅಂತರದಿಂದ ಮುಗ್ಗರಿಸಿದ್ದು, ಮುಂಬೈ ಇಂಡಿಯನ್ಸ್ ಸಂಪೂರ್ಣ ನೆಲಕಚ್ಚಿದೆ.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್ ಆರಂಭಿಸಿದ ಮುಂಬೈ, 20 ಓವರ್‌ಗಳಲ್ಲಿ 155 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಕೊನೇ ಎಸೆತದಲ್ಲಿ ಗೆಲುವು ಸಿಕ್ಕಿತು. ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಿತ್ತು. ಆ ಪಂದ್ಯವನ್ನು ಡೆಲ್ಲಿ 4 ವಿಕೆಟ್ ಅಂತರದಿಂದ ಗೆದ್ದುಕೊಂಡಿತ್ತು. ಅದಾದ ನಂತರ ಮುಂಬೈ ಪಡೆ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ 2013ರಲ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 2019ರಲ್ಲಿ ಸತತ 6 ಆರಂಭಿಕ ಪಂದ್ಯಗಳಲ್ಲಿ ಸೋಲು ಕಂಡಿದ್ದವು.
ಮುಂಬೈ ತಂಡಕ್ಕೆ ಎದುರಾದ ಸೋಲುಗಳು
01. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಅಂತರದ ಸೋಲು
02. ರಾಜಸ್ಥಾನ ರಾಯಲ್ಸ್ ವಿರುದ್ಧ 23 ರನ್ ಅಂತರದ ಸೋಲು
03. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಅಂತರದ ಸೋಲು
04. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ ಸೋಲು
05. ಪಂಜಾಬ್ ಕಿಂಗ್ಸ್ ವಿರುದ್ಧ 12 ರನ್ ಅಂತರದ ಸೋಲು
06. ಲಖನೌ ಸೂಪರ್ ಜೈಂಟ್ಸ್ ವಿರುದ್ಧ 18 ರನ್ ಅಂತರದ ಸೋಲು
07. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್ ಅಂತರದ ಸೋಲು