ಕನ್ಯಾಕುಮಾರಿಯಿಂದ ಇಂದು ಭಾರತ್ ಜೋಡೋ ಯಾತ್ರೆ ಆರಂಭ
ಕನ್ಯಾಕುಮಾರಿ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಕನ್ಯಾಕುಮಾರಿಯಲ್ಲಿ ‘ಭಾರತ್ ಜೋಡೋ ಯಾತ್ರೆ’ಗೆ ಚಾಲನೆ ಸಿಗಲಿದೆ. ರಾಹುಲ್ ಗಾಂಧಿಯವರು ಯಾತ್ರೆಗೆ ಚಾಲನೆ ನೀಡಲಿದ್ದು, ಅದಕ್ಕಿಂತ ಮೊದಲು ಪೆರಂಬದೂರಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕದಲ್ಲಿ ನಡೆಯುವ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಲ್ಲಿಂದ ಕನ್ಯಾಕುಮಾರಿಗೆ ಆಗಮಿಸಿ ತಿರುವಳ್ಳುವರ್ ಸ್ಮಾರಕ, ವಿವೇಕಾನಂದ ಸ್ಮಾರಕ ಹಾಗೂ ಮಾಜಿ ಸಿಎಂ ಕಾಮರಾಜ್ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ನಂತರ ಮಹಾತ್ಮಾ ಗಾಂಧಿ ಮಂಟಪದಲ್ಲಿ ಪ್ರಾರ್ಥನಾ ಸಭೆ ನಡೆಯಲಿದ್ದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗುವ ಯಾತ್ರೆ, ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕರಬಾದ್, ನಾಂದೇಡ್, ಇಂದೋರ್, ಕೊಟಾ, ಅಳ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್ ಮೂಲಕ ಸಾಗಿ ಜಮ್ಮು ಮತ್ತು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ. ರಾಷ್ಟ್ರಧ್ವಜದೊಂದಿಗೆ ಮೆರವಣಿಗೆಯ ಹಿಂದಿನ ಉದ್ದೇಶವೆಂದರೆ ಇತರ ಸಮಾನ ಮನಸ್ಕ ಪಕ್ಷಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಕಾರ್ಯಕ್ರಮಕ್ಕೆ ಸೇರಬೇಕೆಂದು ಪಕ್ಷವು ಬಯಸುತ್ತದೆ. ದ್ವೇಷವನ್ನು ಹೋಗಲಾಡಿಸುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.