NationalPolitics

ಕಾಂಗ್ರೆಸ್‌ನಲ್ಲಿ ಒಂದು ಕುಟುಂಬ, ಒಂದೇ ಟಿಕೆಟ್‌ ನಿಯಮ ಜಾರಿ; ಗಾಂಧಿ ಕುಟುಂಬಕ್ಕೆ ಅನ್ವಯಿಸುತ್ತಾ..?

ನವದೆಹಲಿ: ದೇಶಾದ್ಯಂತ ನೆಲಕಚ್ಚಿರುವ ಕಾಂಗ್ರೆಸ್‌ ಪಕ್ಷ ಚೇತರಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ‘ಒಂದು ಕುಟುಂಬ, ಒಂದೇ ಟಿಕೆಟ್‌’ ನಿಯಮವನ್ನು ಕಾಂಗ್ರೆಸ್‌ ಜಾರಿ ಮಾಡಿದೆ. ಆದ್ರೆ, ಈ ನಿಮಯ ಗಾಂಧಿ ಕುಟುಂಬಕ್ಕೆ ಅನ್ವಯವಾಗುವುದಿಲ್ಲ. ಅವರ ಕುಟುಂಬದವರು ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿರುವುದರಿಂದ ಆ ನಿಯಮ ಅವರಿಗೆ ಅನ್ವಯಿಸಲ್ಲ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಚಿಂತನ ಶಿಬಿರದ ನಂತರ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಸಾಂಸ್ಥಿಕ ಬದಲಾವಣೆಗಳಾಗಲಿವೆ. ಒಂದು ಕುಟುಂಬ ಒಂದೇ ಟಿಕೆಟ್‌ ನಿಯಮಕ್ಕೆ ಕಾಂಗ್ರೆಸ್‌ ನಾಯಕರಲ್ಲಿ ಸಂಪೂರ್ಣ ಸಹಮತವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕೆನ್ ತಿಳಿಸಿದ್ದರು. ಪಕ್ಷದಲ್ಲಿ ಕನಿಷ್ಠ ಐದು ವರ್ಷವಾದರೂ ಕೆಲಸ ಮಾಡದ ನಾಯಕರ ಕುಟುಂಬ ಸದಸ್ಯರಿಗೆ, ಸಂಬಂಧಿಗಳಿಗೆ ಟಿಕೆಟ್‌ ನೀಡಬಾರದು ಎಂಬ ಪ್ರಸ್ತಾವದ ಬಗ್ಗೆ ಪಕ್ಷದಲ್ಲಿ ಸಹಮತವಿದೆ ಎಂದು ಮಾಕೆನ್‌ ತಿಳಿಸಿದ್ದರು. ಅದರಂತೆ ಕಾಂಗ್ರೆಸ್‌ ಈ ನಿಯಮವನ್ನು ಒಪ್ಪಿರುವುದಾಗಿ ತಿಳಿದುಬಂದಿದೆ.

ಈ ನಿಯಮಕ್ಕೆ ಕಾಂಗ್ರೆಸ್‌ನ ಗಾಂಧಿ ಕುಟುಂಬವೂ ಒಳಪಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಜಯ್‌ ಮಾಕೆನ್‌, ಗಾಂಧಿ ಕುಟುಂಬ ಸದಸ್ಯರು ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 2018ರಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇನ್ನು ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿರುವವರು ಸ್ಥಾನ ತೊರೆಯಬೇಕಾಗುತ್ತದೆ. ಮತ್ತೆ ಅದೇ ಹುದ್ದೆಗೆ ಬರಬೇಕಿದ್ದರೆ ಅವರು ಮೂರು ವರ್ಷ ಕಾಯಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Share Post