ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
ಡೆಹ್ರಾಡೂನ್; ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರ ಬ್ಲಾಕ್‌ನಲ್ಲಿ ಇಂದು ಮುಂಜಾನೆ ಮೇಘಸ್ಫೋಟ ಸಂಭವಿಸಿದ್ದು, ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿದೆ. ಸರ್ಖೇತ್ ಗ್ರಾಮದಲ್ಲಿ 2:45ರ ಸಮಯದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಜನರನ್ನು ರಕ್ಷಿಸಲಾಗುತ್ತಿದೆ. ಕೆಲವರನ್ನು ಹತ್ತಿರದ ರೆಸಾರ್ಟ್‌ಗೆ ಕರೆತಂದು ಆಶ್ರಯ ನೀಡಲಾಗಿದೆ.
ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್‌ನ ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಾಮಸಾ ನದಿ ಭೀಕರ ಸ್ವರೂಪ ಪಡೆದುಕೊಂಡಿದೆ. ಇದರಿಂದಾಗಿ ವೈಷ್ಣೋದೇವಿ ಗುಹೆ ಯೋಗ ದೇವಾಲಯ ಮತ್ತು ತಪಕೇಶ್ವರ ಮಹಾದೇವ ದೇವಾಲಯದ ಸಂಪರ್ಕ ಕಡಿತಗೊಂಡಿದೆ. ಸದ್ಯ ಯಾವುದೇ ಪ್ರಾಣ ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ ಎಂದು ದೇವಸ್ಥಾನದ ಸಂಸ್ಥಾಪಕ ಆಚಾರ್ಯ ಬಿಪಿನ್ ಜೋಶಿ ತಿಳಿಸಿದ್ದಾರೆ.