ಹೆಣ್ಣುಮಕ್ಕಳ ಮದುವೆ ವಯಸ್ಸಿನಲ್ಲಿ ಹೆಚ್ಚಳ:ಕೇಂದ್ರದಿಂದ ಹೊಸ ಕಾನೂನು
ದೆಹಲಿ: ದೇಶದಲ್ಲಿ 18ವರ್ಷದ ನಂತರ ಹೆಣ್ಣುಮಕ್ಕಳಿಗೆ ಮದುವೆ ಮಾಡಬಹುದು ಎಂಬ ಕಾನೂನಿಗೆ ಕೇಂದ್ರ ಸರ್ಕಾರದ ತಿದ್ದುಪಡಿ ಮಾಡಿದೆ. ಪ್ರಸ್ತುತ ಯುವತಿಯರ ಮದುವೆ ವಯಸ್ಸು 18ರಿಂದ 21ಕ್ಕೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು 2020ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಹೇಳಿದ್ರು. ಅದರಂತೆಯೇ ಸಮತಾಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ನೇತೃತ್ವದ 10ಸದಸ್ಯರನ್ನೊಳಗೊಂಡ ವಿಶೇಷ ಸಮಿತಿಯನ್ನು ನೇಮಕ ಮಾಡಲಾಯಿತು. ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡುವ ಶಿಫಾರಸುಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ನಿಗದಿತ ವಯಸ್ಸಿಗಿಂತಲೂ ಮೊದಲು ವಿವಾಹವಾಗುವುದರಿಂದ ಉಂಟಾಗುವ ಸಮಸ್ಯೆಗಳು, ತಾಯಿ-ಮಗುವಿನ ಅಂತರ, ತಾಯಿ-ಶಿಶು ಮರಣ ಪ್ರಮಾಣ, ಪೌಷ್ಠಿಕ ಆಹಾರದ ಕೊರತೆ, ಮೊದಲಾದ ವಿಚಾರಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ಬಳಿಕ, ಹೆಣ್ಣುಮಕ್ಕಳ ಮದುವೆ ವಯಸ್ಸು ಹೆಚ್ಚಿಸಿದರೆ ಇವೆಲ್ಲ ಸಮಸ್ಯೆಗಳು ನಿವಾರಣೆಯಾಗುವುದಾಗಿ ಜಯಾ ಜೇಟ್ಲಿಯವರ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಈ ಹೊಸ ಯೋಜನೆಗೆ ಅನುಮೋದನೆ ದೊರೆತ ಬಳಿಕ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರಬಹುದು ಎನ್ನಲಾಗಿದೆ.