National

ಮನೆಯಲ್ಲಿ ಆಕಸ್ಮಿಕ ಬೆಂಕಿ; ಪುಟ್ಟ ಮಗು ಸೇರಿ ಐವರ ದಾರುಣ ಸಾವು

ತಿರುವನಂತಪುರಂ: ಕೇರಳದ ತಿರುವನಂತಪುರಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ದವಳಪುರಂನ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಪುಟ್ಟ ಮಗು ಸೇರಿ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 1.45ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತರನ್ನು ಪ್ರತಾಪನ್‌ (64), ಅವರ ಪತ್ನಿ ಶೆರ್ಲಿ (53), ಅಖಿಲ್‌ (25), ಅಭಿರಾಮಿ (24) ಹಾಗೂ ಎಂಟು ತಿಂಗಳ ರಾಯನ್‌ ಎಂಬ ಗುಂಡು ಮಗು ಸಾವನ್ನಪ್ಪಿದೆ. ಎಲ್ಲರೂ ಬೆಂಕಿಯನ್ನು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ. ಬೆಂಕಿ ದುರಂತದಲ್ಲಿ ನಿಖಿಲ್‌ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇದೇ ವೇಳೆ ಮನೆಯ ಮುಂದೆ ನಿಲ್ಲಿಸಿದ್ದ ಐದಕ್ಕೂ ಹೆಚ್ಚು ಬೈಕ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮಧ್ಯರಾತ್ರಿ ಮನೆಯಿಂದ ಹೊಗೆ ಬರುತ್ತಿರುವುದು ಕಂಡು ಅಕ್ಕಪಕ್ಕದವರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸ್ಥಳೀಯರು ಕೂಡಾ ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಬೆಂಕಿ ಹತೋಟಿಗೆ ಬಂದಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಬರುವ ವೇಳೆಗೆ ಬೆಂಕಿ ಇಡೀ ಮನೆಯನ್ನು ಆವರಿಸಿತ್ತು ಎಂದು ತಿಳಿದುಬಂದಿದೆ.

Share Post