National

ಅಂಡಮಾನ್‌ನಲ್ಲಿ ಅಸಾನಿ ಚಂಡಮಾರುತದ ಅಬ್ಬರ: ಶಾಲಾ-ಕಾಲೇಜುಗಳಿಗೆ ರಜೆ

ಅಂಡಮಾನ್:‌  ಆಗ್ನೇಯ ಬಂಗಾಳಕೊಲ್ಲಿ ಮತ್ತು ಅಂಡಮಾನ್‌ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಅಂಡಮಾನ್‌ ಪ್ರದೇಶದಲ್ಲಿ ಇಂದು ಅಸಾನಿ ಚಂಡಮಾರಿತ ಅಪ್ಪಳಿಸುವ ಸಾಧ್ಯತೆಯಿದೆ ಎಂದು  ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಚಂಡಮಾರುತ ಮುಂದುವರೆದು ಅಂಡಮಾನ್ ದ್ವೀಪಗಳಿಂದ ಮಯನ್ಮಾರ್ ಮತ್ತು ದಕ್ಷಿಣ ಬಾಂಗ್ಲಾದೇಶದ ಕರಾವಳಿಯ ಕಡೆಗೆ ಚಂಡಮಾರುತ ಚಲಿಸುವ ಎಲ್ಲಾ ಸಾಧ್ಯತೆಗಳಿರುವುದಾಗಿ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಈ ಚಂಡಮಾರುತದ ಭೀತಿಯಿಂದಾಗಿ ಈಗಾಗಲೇ ಆ ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದಿಂದಾಗಿ ಭಾರೀ ಮಳೆಯಾಗಲಿದೆ” ಎಂದು ಐಎಂಡಿ ಮಾಹಿತಿ ನೀಡಿದೆ.  ಈಗಾಗಲೇ ಭಾನುವಾರ ಉಂಟಾದ ಭಾರೀ ಮಳೆ ಮತ್ತು ಗಾಳಿಯಿಂದ ಜನ ತತ್ತರಿಸಿದ್ದಾರೆ. ಹಾಗಾಗಿ ಅಲ್ಲಿನ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸುಮಾರು 150 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಜೊತೆಗೆ ಅಂಡಮಾನ್ ನಿಕೋಬಾರ್ ದ್ವೀಪಗಳ ವಿವಿಧ ಭಾಗಗಳಲ್ಲಿ ಆರು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಪೋರ್ಟ್ ಬ್ಲೇರ್‌ನಲ್ಲಿ ಒಟ್ಟು 68 ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ದಿಗ್ಲಿಪುರ್, ರಂಗತ್ ಮತ್ತು ಹುಟ್‌ಬೇ ಪ್ರದೇಶಗಳಲ್ಲಿ ತಲಾ 25 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ.

ಅಸಾನಿ ಚಂಡಮಾರುತದ ಪರಿಣಾಮವಾಗಿ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲೂ ವ್ಯಾಪಕ ಮಳೆಯಾಗಲಿದೆ. ಚಂಡಮಾರುತ ಆತಂಕವಿರುವ ಪ್ರದೇಶಗಳಲ್ಲಿ ಹಡಗುಗಳು, ವಿಮಾನಗಳು, ಹೆಲಿಕಾಪ್ಟರ್‌ಗಳು, ಡೈವಿಂಗ್ ಮತ್ತು ವಿಪತ್ತು ಪರಿಹಾರ ತಂಡಗಳು ಸಿದ್ಧವಾಗಿವೆ. ಜೊತೆಗೆ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಮಾರ್ಚ್ 22ರವರೆಗೆ ಅಂಡಮಾನ್ ಸಮುದ್ರಕ್ಕೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತೀರಕ್ಕೆ ಕೂಡ ಇಳಿಯದಂತೆ ಸೂಚಿಸಲಾಗಿದೆ.

Share Post