ಅಗ್ನಿಪಥ್ ಯೋಜನೆ ವಿರುದ್ಧ ಜೋರಾದ ಪ್ರತಿಭಟನೆ; ಮತ್ತೆರಡು ರೈಲಿಗೆ ಬೆಂಕಿ
ನವದೆಹಲಿ; ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ್’ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಜೋರಾಗುತ್ತಿದೆ. ಅದ್ರಲ್ಲೂ, ಬಿಹಾರದಲ್ಲಿ ನಿನ್ನೆಯಿಂದ ಹಿಂಸಾಚಾರ ನಡೆಯುತ್ತಿದೆ. ರೈಲುಗಳಿಗೆ ಕಲ್ಲು ಹೊಡೆಯೋದು, ಬೆಂಕಿ ಹಚ್ಚೋದು, ರೈಲ್ವೆ ಕಚೇರಿಗಳನ್ನು ಧ್ವಂಸಗೊಳಿಸೋದು ನಡೆಯುತ್ತಿದೆ. ನಿನ್ನೆ ದುಷ್ಕರ್ಮಿಗಳು ರೈಲೊಂದಕ್ಕೆ ಬೆಂಕಿ ಇಟ್ಟಿದ್ದರು. ಇವತ್ತೂ ಕೂಡಾ ಅದೇ ರೀತಿಯ ಘಟನೆ ನಡೆದಿದೆ. ಕಿಡಿಗೇಡಿಗಳು ಬಿಹಾರದಲ್ಲಿ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಜಮ್ಮು ತವಿ ಎಕ್ಸ್‌ಪ್ರೆಸ್ ರೈಲಿಗೆ ಹಾಜಿಪುರ್–ಬರೌನಿ ಮಾರ್ಗದ ಮೊಹಿಯುದ್ದೀನ್‌ನಗರ ನಿಲ್ದಾಣದ ಬಳಿಕ ಬೆಂಕಿ ಹಚ್ಚಲಾಗಿದೆ. ಲಖಿಸರಾಯ್ ಜಂಕ್ಷನ್‌ನಲ್ಲಿ ಮತ್ತೊಂದು ರೈಲಿಗೆ ಬೆಂಕಿ ಹಾಕಿದ್ದಾರೆ.
ಬಿಹಾರದಲ್ಲಿ ನಿನ್ನೆಯೂ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ, ಬಸ್‌ಗಳಿಗೆ ಕಲ್ಲು ತೂರಲಾಗಿತ್ತು. ರೈಲ್ವೆ ಕಚೇರಿಗಳನು ಧ್ವಂಸಗೊಳಿಸಲಾಗಿತ್ತು. ಪ್ರತಿಭಟನಕಾರರು ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟಿದ್ದರು. ಇನ್ನು ಉತ್ತರ ಪ್ರದೇಶದ, ರಾಜಸ್ಥಾನ, ಹರಿಯಾಣದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಸೇನಾ ಪಡೆಗಳಿಗೆ ಯುವ ಜನರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ ಯೋಜನೆ’ಯನ್ನು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿತ್ತು. ಇದಕ್ಕೆ ಪ್ರತಿಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ.