NationalPolitics

8 ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಿಸಿದ ಆಂಧ್ರ ಸಿಎಂ; ಏನಿದು ಜಗನ್‌ ತಂತ್ರಗಾರಿಕೆ..?

ಅಮರಾವತಿ; ಆಂಧ್ರಪ್ರದೇಶ ಸರ್ಕಾರದಲ್ಲಿ 2023ರ ಮಾರ್ಚ್‌ನಲ್ಲಿ ಮೂರು ವಿಧಾನಪರಿಷತ್‌ ಸ್ಥಾನಗಳು ತೆರವಾಗಲಿವೆ. ಅದಕ್ಕಾಗಿ ಎಂಟು ತಿಂಗಳ ನಂತರ ನಡೆಯುವ ಚುನಾವಣೆಗೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳನ್ನು ಈಗಲೇ ಘೋಷಿಸಿ ಅಚ್ಚರಿಗೆ ಕಾರಣವಾಗಿದೆ. ಪಕ್ಷದ ಅಧ್ಯಕ್ಷರೂ ಆಗಿರುವ ಸಿಎಂ ಜಗನ್‌ ಮೋಹನ್‌ ರೆಡ್ಡಿ, ಮೂವರು ಅಭ್ಯರ್ಥಿಗಳನ್ನು ಈಗಲೇ ಫೈನಲ್‌ ಮಾಡಿ ಘೋಷಣೆ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ ಪದವೀಧರ ಕ್ಷೇತ್ರಕ್ಕೆ ಎಸ್‌.ಸುಧಾಕರ್‌ ಅವರಿಗೆ ಟಿಕೆಟ್‌ ಕನ್ಫರ್ಮ್‌ ಮಾಡಲಾಗಿದೆ. ಸುಧಾಕರ್‌ ಅವರು ಸದ್ಯ ಬ್ರಾಹ್ಮಣರ ನಿಗಮದ ಅಧ್ಯಕ್ಷರಾಗಿದ್ದಾರೆ. ಪ್ರಕಾಶಂ, ನೆಲ್ಲೂರು, ಚಿತ್ತೂರು ಪದವೀಧರ ಕ್ಷೇತ್ರಕ್ಕೆ ಶಾಮ್ ಪ್ರಸಾದ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಕರ್ನೂಲ್, ಕಡಪಾ, ಅನಂತಪುರ ಪದವೀಧರ ಕ್ಷೇತ್ರಕ್ಕೆ ಹಾಲಿ ಶಾಸಕರಾಗಿರುವ ವಿ.ರವೀಂದ್ರ ರೆಡ್ಡಿ ಅವರಿಗೆ ಟಿಕೆಟ್ ಕೊಡಲಾಗಿದೆ.

ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಆಧಿಕಾರದಲ್ಲಿದೆ. ಹೀಗಾಗಿ ಟಿಕೆಟ್‌ ಆಕಾಂಕ್ಷಿಗಳು ತುಂಬಾನೇ ಇದ್ದಾರೆ. ಪೈಪೋಟಿ ಇರುವಾಗ ಕೊನೆಯ ಕ್ಷಣದವರೆಗೂ ಕಾಯಲಾಗುತ್ತದೆ. ಅಸಮಾಧಾನ ಮಾಡಿಕೊಂಡವರನ್ನು ಸಮಾಧಾನಪಡಿಸಿ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ನೀಡಲಾಗುತ್ತದೆ. ಆದ್ರೆ ಜಗನ್‌ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಂಟು ತಿಂಗಳ ಮೊದಲೇ ಟಿಕೆಟ್‌ ಘೋಷಿಸಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ನಲ್ಲಿ ಜಗನ್‌ ಹೇಳಿದ್ದೇ ಎಲ್ಲರೂ ಕೇಳಬೇಕು ಎಂಬ ಆರೋಪವಿದೆ. ಇದೇ ಕಾರಣಕ್ಕೆ ಅವರು ಈಗಲೇ ಹೆಸರುಗಳು ಘೋಷಣೆ ಮಾಡಿದ್ದರೂ ವಿರೋಧ ಎದುರಾಗುವುದು ಕಡಿಮೆ ಎಂದು ಹೇಳಲಾಗುತ್ತಿದೆ.

Share Post