Lifestyle

“ಮಾರುತಗಳ ಮುಂಗಾಮಿ” ಈ ಚಾತಕ ಪಕ್ಷಿ

ಬೆಂಗಳೂರು: ಹನಿ ನೀರನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್ ಗಟ್ಟಲೆ ಸಂಚರಿಸಿ ಗುಟುಕು ನೀರು ಸಿಕ್ಕೊಡನೆ ಕುಡಿದು ದಣಿವಾರಿಸಿಕೊಳ್ಳುವ ಎಷ್ಟೋ ಪಕ್ಷಿಗಳನ್ನು ನಾವು ನೋಡಿದ್ದೇವೆ ಆದರೆ ʻಮಾರುತಗಳ ಮುಂಗಾಮಿʼ ಎಂದೇ ಕರೆಯಲ್ಪಡುವ ಈ ಚಾತಕ ಪಕ್ಷಿ ಮಳೆಗಾಗಿ ಕಾದು, ಮಳೆ ಬೀಳುವ ಸಮಯದಲ್ಲಿ ಮಳೆ ನೀರನ್ನಷ್ಟೇ ಕುಡಿದು ಬದುಕುವ ಪಕ್ಷಿ. ಸದಾ ಮಳೆಯೊಂದಿಗೇ ಸಂಚಾರ ಮಾಡುತ್ತ ಮಳೆ ನೀರಿಗಾಗಿ ದೇಶದಿಂದ ದೇಶಕ್ಕೆ ವಲಸೆ ಬರುವ ಪಕ್ಷಿ.

ಹವಾಮಾನ ಇಲಾಖೆಯ ಜವಾಬ್ದಾರಿಯನ್ನು ಇಲಾಖೆ ಪ್ರಾರಂಭವಾಗುವ ಮುಂಚೆಯಿಂದಲೂ ಚಾಚೂತಪ್ಪದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವ ಪಕ್ಷಿ. ಇಲಾಖೆಯ ವರದಿ ತಪ್ಪಾಗಬಹುದು ಆದರೆ ಈ ಪಕ್ಷಿಯ ಮಾಹಿತಿ ತಪ್ಪಾಗಲು ಸಾಧ್ಯವೇ ಇಲ್ಲ. ಏಕೆಂದರೆ ಮುಂಗಾರಿನ ಗಾಳಿಯ ದಿಕ್ಕಿನಲ್ಲಿ ಕ್ರಮಿಸುವ ಹಕ್ಕಿ ಇದು. ಇದರ ದನಿ ಮೊದಲ ಮಳೆಯ ಸೂಚಕ, ಚಾತಕ ಪಕ್ಷಿ ಕಾಣಿಸಿತೆಂದರೆ ಮಳೆಯಂತು ನೂರಕ್ಕೆ ನೂರು ಖಚಿತ. ಹಾಗಾಗಿ ರೈತರು ಮುಂಗಾರಿನ ಸಮಯದಲ್ಲಿ ಹಂಬಲದಿಂದ ಈ ಪಕ್ಷಿಯ ವೀಕ್ಷಣೆಗೆ ಕಾಯುವುದು ಉಂಟು.

ಇನ್ನು ಅಷ್ಟು ದೂರದ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ದಾಟಿ ಬಂದು ಸಂತಾನೋತ್ಪತ್ತಿ ಮಾಡುವುದು ಬೇಡವೇ…? ಮಳೆ ನೀರು, ಆಹಾರ ಜೊತೆಗೆ ಸಂತಾನೋತ್ಪತ್ತಿಗಾಗಿ ಭಾರತಕ್ಕೆ ವಲಸೆ ಬರುತ್ತದೆ. ಅದರಲ್ಲೂ ಇದು ಕೋಗಿಲೆ ಜಾತಿಗೆ ಸೇರಿದ್ದು ಬೇರೆ, ಅದರ ಬುದ್ಧಿ ಮರೆಯುವುದು ಉಂಟೆ. ಅದರಂತೆಯೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ತದನಂತರ ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಟ್ಟು ತಮ್ಮ ಮುಂದಿನ ಪಯಣ ಬೆಳಸುತ್ತದೆ.

 

 

Share Post