ವಿದೇಶದಿಂದ ವಲಸೆ ಬಂದ ʻಚುಕ್ಕೆ ಗದ್ದೆಗೊರವʼ ಹಕ್ಕಿ
ಶಿಡ್ಲಘಟ್ಟ: ಮನುಷ್ಯರು ದೇಶದಿಂದ ದೇಶಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಅಲ್ಲಿನ ಪ್ರಕೃತಿ ಸೌಂದರ್ಯ, ಸೊಬಗನ್ನು ಸವಿಯಲು ಹೇಗೆ ಪ್ರವಾಸ ಕೈಗೊಳ್ಳುತ್ತಾರೋ ಹಾಗೆಯೇ ಪಕ್ಷಿಗಳು ಕೂಡ ಕಾಲಕ್ಕೆ ತಕ್ಕಂತೆ ತಮ್ಮ ಪ್ರಯಾಣವನ್ನು ಬೆಳೆಸುತ್ತವೆ. ಋತುಮಾನ ಬದಲಾದಂತೆ ಹಕ್ಕಿಗಳೂ ಸಹ ತಮ್ಮ ಸಂತಾನೋತ್ಪತ್ತಿ ಅಥವಾ ಆಹಾರ ಹರಸಿ ಬೇರೆ ಬೇರೆ ದೇಶಗಳಿಂದ ವಲಸೆ ಬರುವುದುಂಟು. ಹಾಗಾಗಿಯೇ ಎಲ್ಲಾ ಕಡೆ ಪಕ್ಷಿಧಾಮಗಳು ತಲೆಯೆತ್ತಿರುವುದು. ಈ ಚಳಿಗಅಲದ ಸಮಯ ಅಂದ್ರೆ ನವೆಂಬರ್, ಡಿಸೆಂಬರ್ ತಿಂಗಳು ಬಂದ್ರೆ ಸಾಕು ಹಲವಾರು ಜಾತಿಯ ಹಕ್ಕಿಗಳು ತಮಗೆ ಬೇಕಾದ ವ್ಯವಸ್ಥಿತವಾದ ಪ್ರಾಕೃತಿಕ ಸ್ಥಳವನ್ನು ಹರಸುತ್ತಾ ವಲಸೆ ಬರುತ್ತವೆ ಅದರಲ್ಲಿ ʻಚುಕ್ಕೆ ಗದ್ದೆಗೊರವʼ ಕೂಡ ಒಂದು ಈ ಹಕ್ಕಿ ಯೂರೋಪ್, ಉತ್ತರ ಏಷಿಯಾ ಭಾಗದಿಂದ ಶಿಡ್ಲಘಟ್ಟದ ಗೌಡನಕೆರೆಗೆ ವಲಸೆ ಬಂದಿದೆ. ಈ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ ವುಡ್ ಅಥವಾ ಸ್ಪಾಟೆಡ್ ಸ್ಯಾಂಡ್‌ಪೈಪರ್ ಎನ್ನುತ್ತಾರೆ. ಕಂದು ಬಣ್ಣದ ಬೆನ್ನು ಮತ್ತು ರೆಕ್ಕೆಯ ಮೇಲೆ ಬಿಳಿ ಬಣ್ಣದ ಚುಕ್ಕೆಗಳಿವೆ. ಎದೆ ಮತ್ತು ಹೊಟ್ಟೆಯ ಭಾಗ ಬೆಳ್ಳಗಿದ್ದು ಚೂಪಾದ ಕೊಕ್ಕನ್ನು ಹೊಂದಿರುತ್ತದೆ. ಕಣ್ಣಿನ ಮೇಲೆ ಬಿಳಿಯ ಹುಬ್ಬಿದ್ದು, ಹುಳು ಹುಪ್ಪಟೆಗಳನ್ನು ತಮ್ಮ ಚೂಪಾದ ಕೊಕ್ಕಿನಿಂದ ಬೆದಕುತ್ತಾ, ಚಿಫ್, ಚಿಫ್, ಚಿಫ್ ಎಂದು ತನ್ನದೇ ದಾಟಿಯಲ್ಲಿ ಕೂಗುತ್ತಾ ಒಂದೆಡೆಯಿಂದ ಮತ್ತೊಂದೆಡೆಗೆ ವೇಗವಾಗಿ ಹಾರುತ್ತದೆ.
ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ಬಹುತೇಕ ಎಲ್ಲ ಕೆರೆಗಳಲ್ಲಿಯೂ ನೀರು ನಿಂತಿದೆ. ಅದರಂತೆ ಇದು ನೀರನ್ನು ಹೆಚ್ಚಾಗಿ ಅವಲಂಬಿಸುವುದಿಲ್ಲ ನೀರು ಅಲ್ಪಮಾತ್ರವಿರುವೆಡೆ ಆಹಾರ ಹುಡುಕುತ್ತವೆ. ಈಗ ಪ್ರಸ್ತುತ ಹಕ್ಕಿಗಳು ಗೌಡನಕೆರೆಯನ್ನು ತಮ್ಮ ತಂಗುದಾಣವಾಗಿ ಮಾಡಿಕೊಂಡಿವೆ. ಯೂರೋಪ್ ಮತ್ತು ಉತ್ತರ ಏಷಿಯಾ ಭಾಗಗಳಲ್ಲಿ ಮೇ ಜೂನ್ ತಿಂಗಳಿನಲ್ಲಿ ಮೊಟ್ಟೆಯಿಟ್ಟು ಮರಿಮಾಡುವ ಈ ವುಡ್ ಅಥವಾ ಸ್ಪಾಟೆಡ್ ಸ್ಯಾಂಡ್‌ಪೈಪರ್ ಹಕ್ಕಿಗಳು ಅಲ್ಲಿ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಕಿ.ಮೀ ದೂರ ವಲಸೆ ಹೊರಡುತ್ತವೆ. ಅವುಗಳಿಗೆ ಸೂಕ್ತ ಆಹಾರ ಮತ್ತು ಅಪಾಯ ರಹಿತ ವಾತಾವರಣವಿರುವ ಕೆರೆಗಳಲ್ಲಿ ಕಾಣಸಿಗುತ್ತವೆ.
‘ಶಿಡ್ಲಘಟ್ಟದ ಗೌಡನಕೆರೆಗೆʼ ಈ ವರ್ಷದ ಮೊದಲ ದೂರದ ಅತಿಥಿಯಾಗಿ ವುಡ್ ಅಥವಾ ಸ್ಪಾಟೆಡ್ ಸ್ಯಾಂಡ್‌ಪೈಪರ್ ಹಕ್ಕಿ ಆಗಮಿಸಿದೆ.