InternationalLifestyle

ಯೋಗಾ ದಿನಾಚರಣೆ ಸ್ಪೆಷಲ್‌; ಯೋಗಾ ಯಾರು ಮಾಡಬಹುದು..? ಯಾರು ಮಾಡಬಾರದು..?

ಇಂದು ಅಂತಾರಾಷ್ಟ್ರೀಯ ಯೋಗಾ ದಿನ.. ಭಾರತ ಜಗತ್ತಿಗೆ ನೀಡಿದ ಅದ್ಭುತಗಳಲ್ಲಿ ಯೋಗವೂ ಕೂಡಾ ಒಂದು.. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಒದಗಿಸುವ ಯೋಗವು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದೆ.. ಇದರ ಎಲ್ಲಾ ಬೇರುಗಳು ಭಾರತದಲ್ಲಿವೆ.. ವೇದಕಾಲದಿಂದಲೂ ಭಾರತದಲ್ಲಿ ಯೋಗವಿದೆ. ಸ್ವಾಮಿ ವಿವೇಕಾನಂದರು (1863-1902) ಪಾಶ್ಚಾತ್ಯ ದೇಶಗಳಿಗೆ ಯೋಗವನ್ನು ಪರಿಚಯಿಸಿದರು ಮತ್ತು ಜನಪ್ರಿಯಗೊಳಿಸಿದರು.

ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರದ ಸಲಹೆಯ ಮೇರೆಗೆ ವಿಶ್ವಸಂಸ್ಥೆಯು 2015 ರಲ್ಲಿ ಜೂನ್ 21 ಅನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಘೋಷಣೆ ಮಾಡಿತು.. ಪ್ರಪಂಚದಾದ್ಯಂತ 190ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಈ ದಿನವನ್ನು ಆಚರಿಸಲು ಯೋಗ ಮಾಡುತ್ತಾರೆ..

ಯೋಗವನ್ನು ಪಾಶ್ಚಾತ್ಯ ದೇಶಗಳಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತದೆ.. 1893 ರಲ್ಲಿ, ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲು ಅಮೆರಿಕಕ್ಕೆ ಹೋದ ಸ್ವಾಮಿ ವಿವೇಕಾನಂದರು ತಮ್ಮ ಉಪನ್ಯಾಸಗಳಲ್ಲಿ ಭಾರತ ಮತ್ತು ಹಿಂದೂ ಧರ್ಮದ ವೈಭವವನ್ನು ವಿವರಿಸಿದರು.. 1896ರಲ್ಲಿ ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿ ‘ರಾಜಯೋಗ’ ಪುಸ್ತಕವನ್ನು ಪ್ರಕಟಿಸಿದರು.. ಆ ಪುಸ್ತಕವು ಯೋಗದ ಮಹತ್ವವನ್ನು ತಿಳಿಯಲು ಪಾಶ್ಚಾತ್ಯರಿಗೆ ಸಾಕಷ್ಟು ಸಹಾಯ ಮಾಡಿತು..

ಇದಾದ ಮೇಲೆ ಅನೇಯ ಯೋಗಗುರುಗಳು, ಶಿಕ್ಷಕರು ಭಾರತದಿಂದ ಅಮೆರಿಕ ಹಾಗೂ ಯೂರೋಪ್‌ ದೇಶಗಳಿಗೆ ಹೋದರು.. ಯೋಗಾ ಬಹಳ ಪ್ರಾಚೀನವಾದುದು.. ವೇದಕಾಲದಿಂದಲೂ ಇದರ ಉಲ್ಲೇಖವಿದೆ. 2500 ವರ್ಷಗಳ ಹಿಂದೆ ಸಾಧು ಸಂತರು ಯೋಗಾಭ್ಯಾಸ ಮಾಡುತ್ತಿದ್ದರು ಎಂದು ಇತಿಹಾಸ ಅಧ್ಯಯನಗಳು ಹೇಳುತ್ತವೆ.

‘ಸೂರ್ಯನಮಸ್ಕಾರ’ ಯೋಗ ಪ್ರಮುಖ ಆಸನ.. ಇದು 1930ರಿಂದ ಪ್ರಚಲಿತದಲ್ಲಿದೆ. ಜಾಗತೀಕರಣದ ಭಾಗವಾಗಿ ಯೋಗವೂ ಹಲವು ರೂಪಗಳನ್ನು ಪಡೆದುಕೊಂಡಿದೆ. ವಿವಿಧ ಹೊಸ ಆಸನಗಳು ಆಚರಣೆಗೆ ಬಂದಿವೆ. ಯೋಗವು ಅನೇಕ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಅಷ್ಟಾಂಗ ಯೋಗ, ಅಯ್ಯಂಗಾರ್ ಮತ್ತು ವಿನ್ಯಾಸ ಯೋಗಗಳೂ ಈ ಕ್ರಮದಲ್ಲಿ ರೂಪುಗೊಂಡವು. ಅಷ್ಟಾಂಗ ಯೋಗವನ್ನು ಪತಂಜಲಿ ಋಷಿ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗುತ್ತದೆ.

ಹಿರಿಯರು ಯೋಗ ಮಾಡಬಹುದೇ?
ಯೋಗಕ್ಕೆ ವಯಸ್ಸು ಅಡ್ಡಿ ಬರುವುದೇ ಇಲ್ಲ. ಅನೇಕ ಜನರು ಎಂಬತ್ತರ ವಯಸ್ಸಿನಲ್ಲಿ ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು 85 ವರ್ಷದ ದಾಟಿದ ಮೇಲೂ ಯೋಗಾ ಮಾಡುತ್ತಿದ್ದ ಚಿತ್ರಗಳು ಬಹಿರಂಗವಾಗಿದ್ದವು.. ವಿಶೇಷವಾಗಿ ಎಲ್ಲಾ ವಯಸ್ಸಿನ ಜನರಿಗೆ ಕೆಲವು ರೀತಿಯ ಯೋಗ ಆಸನಗಳಿವೆ. ಯೋಗವು ವ್ಯಾಯಾಮದ ಒಂದು ರೂಪವಾಗಿದೆ. ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರು ಬೇಕಾದರೂ ಮಾಡಬಹುದು. ಕುರ್ಚಿಯಿಂದ ಏಳಲು ಸಾಧ್ಯವಾಗದ ದೈಹಿಕ ವಿಕಲಚೇತನರಿಗಾಗಿ ವಿಶೇಷವಾದ ‘ಕುರ್ಚಿ ಯೋಗ’ವೂ ಇದೆ.

ಯೋಗವು ಮಾನಸಿಕ ಶಾಂತಿ ಮತ್ತು ವಿಶ್ರಾಂತಿಯನ್ನು ತರುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ದೇಹದ ಭಾಗಗಳು ಮತ್ತು ಮನಸ್ಸಿನ ನಡುವಿನ ಸಮನ್ವಯವನ್ನು ಸುಧಾರಿಸುತ್ತದೆ. ನಮ್ಮಲ್ಲಿ ಏಕಾಗ್ರತೆ ಹೆಚ್ಚಿಸುತ್ತದೆ.. ಯೋಗಾಸನಗಳು ರಕ್ತ ಸಂಚಾರವನ್ನು ಸುಧಾರಿಸುತ್ತದೆ. ದೇಹದಿಂದ ತ್ಯಾಜ್ಯವನ್ನು ತ್ವರಿತವಾಗಿ ಹೊರಹಾಕಲಾಗುತ್ತದೆ.
ದೈಹಿಕ ವ್ಯಾಯಾಮದಿಂದ ಸ್ನಾಯುಗಳು ಬಲಗೊಳ್ಳುತ್ತವೆ.

Share Post