International

ಜೈಲಿನಲ್ಲೇ ಮದುವೆಯಾದ ವಿಕಿಲೀಕ್ಸ್‌ ಖ್ಯಾತಿಯ ಜೂಲಿಯನ್‌ ಅಸ್ಸಾಂಜೆ

ಲಂಡನ್: ಹಲವಾರು ದಾಖಲೆಗಳನ್ನು ಲೀಕ್‌ ಮಾಡಿ ಪ್ರಪಂಚದಾದ್ಯಂತ ಹೆಸರಾಗಿದ್ದ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸ್ಸಾಂಜೆ ಜೈಲಿನಲ್ಲೇ ವಿವಾಹವಾಗಿದ್ದಾರೆ. ಲಂಡನ್‌ನ ಬೆಲ್ಮಾರ್ಶ್ ಜೈಲಿನಲ್ಲಿ ಅಸ್ಸಾಂಜೆ ಬಂಧಿಯಾಗಿದ್ದಾರೆ. ಈ ಜೈಲಿನ ಹಾಲ್‌ನಲ್ಲಿ ಬಹುಕಾಲದ ಗೆಳತಿ ಸ್ಟೆಲ್ಲಾ ಮೋರಿಸ್‌ ಅವರೊಂದಿಗೆ ಅಸ್ಸಾಂಜೆ ಮದುವೆಯಾಗಿದ್ದಾರೆ. ಈ ವೇಳೆ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು. ಜೊತೆಗೆ ಮದುವೆ ಸಮಾರಂಭದಲ್ಲಿ ಇಬ್ಬರು ಸಾಕ್ಷಿಗಳು ಹಾಗೂ ಜೈಲು ಅಧಿಕಾರಿಗಳು ಸೇರಿ ಕೇವಲ ಎಂಟು ಮಂದಿ ಹಾಜರಿದ್ದರು.

ಅಸ್ಸಾಂಜೆ 2019ರಿಂದ ಲಂಡನ್‌ ಜೈಲಿನಲ್ಲಿ ಇದ್ದಾರೆ. ವಿವಿಧ ದೇಶಗಳಿಗೆ ಸಂಬಂಧಿಸಿದ ರಾಜತಾಂತ್ರಿಕ ಮತ್ತು ರಹಸ್ಯ ಮಿಲಿಟರಿ ದಾಖಲೆಗಳ ಸೋರಿಕೆಯ ಆರೋಪದಡಿಯಲ್ಲಿ ಅಸ್ಸಾಂಜೆ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಅಮೆರಿಕ ಒಂದೇ ಅಸ್ಸಾಂಜೆ ವಿರುದ್ಧ 18 ಕೇಸ್‌ಗಳನ್ನು ದಾಖಲಿಸಿದೆ. ಇನ್ನು ಸ್ಟೆಲ್ಲಾ ಅವರು ವಿಕಿಲೀಕ್ಸ್‌ನ ಲೀಗಲ್‌ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. 2015ರಿಂದ ಅವರು ಸಹಜೀವನ ನಡೆಸಿದ್ದರು. ಹೀಗಾಗಿ ಈ ಜೋಡಿ ಈಗಾಗಲೇ ಇಬ್ಬರು ಮಕ್ಕಳು ಕೂಡಾ ಇದ್ದಾರೆ.

Share Post