ಯುದ್ಧ ಮುಗಿದ ಮೇಲೆ ಗಾಜಾ ಭದ್ರತೆ ಜವಾಬ್ದಾರಿ ನಮ್ಮದೇ; ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್; ಗಾಜಾ ಪಟ್ಟಿಯಲ್ಲಿ ಯುದ್ಧ ಮುಗಿದ ನಂತರ ಅದರ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಮೆರಿಕದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿಯಾಗಿ ಹೇಳಿದ್ದಾರೆ.
ಒತ್ತೆಯಾಳುಗಳನ್ನು ಹಮಾಸ್ ನಿಯಂತ್ರಣದಿಂದ ಮುಕ್ತಗೊಳಿಸುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಗಾಜಾದಲ್ಲಿ 2007 ರಿಂದ ಹಮಾಸ್ ಆಳ್ವಿಕೆ ನಡೆಸುತ್ತಿದೆ. ಆದರೆ ಇಸ್ರೇಲ್ ಗಾಜಾದ ವಾಯುಪ್ರದೇಶ ಮತ್ತು ಕರಾವಳಿಯನ್ನು ನಿಯಂತ್ರಿಸುತ್ತದೆ. ಮಾನವೀಯ ಕಾರಣಗಳಿಗಾಗಿ ಯುದ್ಧದ ತಾತ್ಕಾಲಿಕ ಅಮಾನತು ಸಾಧ್ಯ ಎಂದು ನೆತನ್ಯಾಹು ಹೇಳಿದರು.
ಪರಿಸ್ಥಿತಿಯನ್ನು ಅವಲೋಕಿಸಿದ ನಂತರ, ಗಾಜಾಕ್ಕೆ ಸರಕುಗಳು ಮತ್ತು ಮಾನವೀಯ ನೆರವು ಹೋಗಲು ಅವಕಾಶ ನೀಡಲು ಒಂದು ಅಥವಾ ಎರಡು ಗಂಟೆಗಳ ಕಾಲ ಯುದ್ಧವನ್ನು ನಿಲ್ಲಿಸಲಾಗುವುದು ಎಂದು ಅವರು ಹೇಳಿದರು. ಯುಎಸ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು ಇಸ್ರೇಲ್ ಮತ್ತು ಹಮಾಸ್ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸುವಂತೆ ಕೇಳುತ್ತಿವೆ. ಮಧ್ಯಪ್ರಾಚ್ಯದ ಹಲವು ದೇಶಗಳೊಂದಿಗೆ ಅಮೆರಿಕವೂ ಮಾತನಾಡುತ್ತಿದೆ. ಸೋಮವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಟರ್ಕಿಗೆ ತೆರಳಿ ಮಾತುಕತೆ ನಡೆಸಿದರು.