ನಾರ್ವೆಯಲ್ಲಿ ನಾಪತ್ತೆಯಾದ ಅಮೆರಿಕ ನೌಕಾಪಡೆ ವಿಮಾನ
ಓಸ್ಲೋ: ನಾರ್ವೆಯಲ್ಲಿ ಅಮೆರಿಕ ನೌಕಾಪಡೆ ವಿಮಾನ ನಾಪತ್ತೆಯಾಗಿದೆ. ತರಬೇತಿನಿರತ ವಿಮಾನವೊಂದು ನಾರ್ವೆಯಲ್ಲಿ ಸಂಪರ್ಕ ಕಡಿದುಕೊಂಡಿದೆ ಎಂದು ಉತ್ತರ ನಾರ್ವೆಯ ‘ಜಂಟಿ ರಕ್ಷಣಾ ಸಹಕಾರ ಕೇಂದ್ರ’ ತಿಳಿಸಿದೆ. ಶುಕ್ರವಾರ ರಾತ್ರಿ ‘ಎಂವಿ–22ಬಿ’ ವಿಮಾನವು ನಿಗದಿತ ಸಮಯಕ್ಕೆ ನಾರ್ವೆಯ ಬೋಡೊ ನಗರವನ್ನು ತಲುಪಿಲ್ಲ. ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
ತರಬೇತಿ ನಿರತ ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಚಳಿಗಾಲದ ಕಠಿಣ ಪರಿಸ್ಥಿತಿಗಳಲ್ಲಿ ಹೋರಾಡಲು ಸಿದ್ಧತೆಗಾಗಿ ನ್ಯಾಟೊ ಸದಸ್ಯ ರಾಷ್ಟ್ರಗಳ ಸೇನೆಗಳು ನಾರ್ವೆ ಪಡೆಗಳೊಂದಿಗೆ ಜಂಟಿ ತರಬೇತಿಯಲ್ಲಿ ಭಾಗವಹಿಸುತ್ತವೆ. ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಕೋಲ್ಡ್ ರೆಸ್ಪಾನ್ಸ್’ ಸೇನಾ ಕಾರ್ಯಾಚರಣೆಯಲ್ಲಿ ‘ಎಂವಿ–22ಬಿ’ ಭಾಗಿಯಾಗಿತ್ತು. ರಷ್ಯಾ–ಉಕ್ರೇನ್ ಸಂಘರ್ಷ ಆರಂಭವಾಗುವುದಕ್ಕೂ ಬಹಳಷ್ಟು ಹಿಂದೆಯೇ ಈ ತರಬೇತಿ ನಿಗದಿಯಾಗಿತ್ತು. ಈ ಕುರಿತು ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ನಾರ್ವೆ ತಿಳಿಸಿದೆ.