International

ಉಕ್ರೇನ್‌ ವಿರುದ್ಧ ರಷ್ಯಾ ಜಯ ಗಳಿಸುವುದಿಲ್ಲ; ಅಮೆರಿಕ ಅಧ್ಯಕ್ಷ ಜೋ ಬೈಡೆನ್‌

ವಾಷಿಂಗ್ಟನ್: ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದಲ್ಲಿ ವ್ಲಾಡಿಮಿರ್ ಪುಟಿನ್ ಜಯಗಳಿಸುವುದಕ್ಕೆ ಸಾಧ್ಯವೇ ಇಲ್ಲ. ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮೂರನೇ ಮಹಾಯುದ್ಧವಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಡೆಮಾಕ್ರಟಿಕ್ ಕಾಕಸ್‌ನ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ನಾವು ಉಕ್ರೇನ್‌ಗೆ ಬೆಂಬಲವನ್ನು ನೀಡುವ ಮೂಲಕ ಯುರೋಪ್‌ನಲ್ಲಿನ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲುವುದನ್ನು ಮುಂದುವರಿಸಲಿದ್ದೇವೆ ಮತ್ತು ನ್ಯಾಟೊ ದೇಶಗಳ ಪ್ರತಿ ಇಂಚು ಭೂಮಿಯನ್ನೂ ರಕ್ಷಿಸುತ್ತೇವೆ ಎಂದು ಹೇಳಿದರು.

ನ್ಯಾಟೊ, ಉತ್ತರ ಅಮೆರಿಕ ಮತ್ತು ಯುರೋಪಿನ 30 ರಾಷ್ಟ್ರಗಳ ಗುಂಪಾಗಿದೆ. ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಅದರ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ನ್ಯಾಟೊ ಉದ್ದೇಶವಾಗಿದೆ. ರಷ್ಯಾದ ಮಿಲಿಟರಿ ಆಕ್ರಮಣವನ್ನು ಎದುರಿಸುವಲ್ಲಿ ಉಕ್ರೇನ್ ಜನರು ಗಮನಾರ್ಹವಾದ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಆದರೆ, ಅಮೆರಿಕ ಒದಗಿಸುವ ಭದ್ರತಾ ನೆರವು ಅವರ ರಕ್ಷಣೆಯಲ್ಲಿ ನಿರ್ಣಾಯಕವಾಗಿದೆ ಎಂದು ಬೈಡನ್ ಹೇಳಿದರು. ರಷ್ಯಾದ ಗಡಿಯಲ್ಲಿ ಅಮೆರಿಕದ 12,000 ಯೋಧರನ್ನು ನಿಯೋಜಿಸಿಸಿದ್ದೇನೆ. ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ಮತ್ತು ಸೆಟ್ರಾ ದೇಶಗಳ ರಷ್ಯಾಗೆ ಹೊಂದಿಕೊಂಡ ಗಡಿಗಳಲ್ಲಿ ಈ ನಿಯೋಜನೆ ಮಾಡಲಾಗಿದೆ. ನ್ಯಾಟೊ ದೇಶಗಳ ಪ್ರದೇಶಗಳ ರಕ್ಷಣೆಯ ಬಾಧ್ಯತೆ ನಮ್ಮ ಮೇಲಿದೆ. ಆದರೂ ನಾವು ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧ ನಡೆಸಲು ಹೋರಾಡುವುದಿಲ್ಲ ಎಂದು ಹೇಳಿದರು.

Share Post