ಅಮೆರಿಕದ ಶ್ವೇತ ಭವನಕ್ಕೆ ನುಗ್ಗಲು ಯತ್ನಿಸಿದ ತೆಲುಗು ಯುವಕ!
ನ್ಯೂಯಾರ್ಕ್; ಅಮೆರಿಕದ ಶ್ವೇತಭವನಕ್ಕೆ ನುಸುಳಲು ಯತ್ನಿಸಿದ ತೆಲುಗು ಹುಡುಗನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ಹೇಳಿದೆ.
ಮಿಸೌರಿಯ ನಿವಾಸಿ ಕಂದುಲ ಸಾಯಿ ವರ್ಷಿತ್ (19) ಅವರು ಸೋಮವಾರ ರಾತ್ರಿ ಸ್ಥಳೀಯ ಕಾಲಮಾನ 10:00 ಗಂಟೆಯ ಸುಮಾರಿಗೆ ಯು-ಹಾಲ್ ಕಂಪನಿಯ ಟ್ರಕ್‌ನಲ್ಲಿ ಶ್ವೇತಭವನವನ್ನು ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆ ವ್ಯಕ್ತಿ ಲಾಫಾಯೆಟ್ಟೆ ಚೌಕದ ಉತ್ತರ ಭಾಗಕ್ಕೆ ವಾಹನವನ್ನು ಚಲಾಯಿಸಿ ಅಲ್ಲಿನ ಭದ್ರತಾ ಬ್ಯಾರಿಕೇಡ್‌ಗಳಿಗೆ ಗುದ್ದಿದ್ದಾನೆ ಎಂದು ತಿಳಿದುಬಂದಿದೆ. ಕೂಡಲೇ ಪೊಲೀಸರು ವರ್ಷಿತ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಟ್ರಕ್‌ಗೆ ಡಿಕ್ಕಿಯಾದ ನಂತರ, ವರ್ಷಿತ್ ನಾಜಿ ಧ್ವಜವನ್ನು ಹೊರತೆಗೆದು ಅದನ್ನು ಬೀಸಿದನು ಎಂದು ಯುಎಸ್ ಪಾರ್ಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಶ್ವೇತಭವನಕ್ಕೆ ನುಗ್ಗಿದ್ದಾಗಿ ವರ್ಷಿತ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಸೇಂಟ್ ಲೂಯಿಸ್‌ನ ಉಪನಗರವಾದ ಮಿಸೌರಿಯ ಚೆಸ್ಟರ್‌ಫೀಲ್ಡ್‌ನಲ್ಲಿ ವಾಸಿಸುತ್ತಿರುವ ವರ್ಷಿತ್, ನಾಜಿ ಇತಿಹಾಸ, ಅಧಿಕಾರ, ಸರ್ವಾಧಿಕಾರ ಇತ್ಯಾದಿಗಳಿಂದ ಪ್ರೇರಿತನಾಗಿದ್ದ ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ವರ್ಷಿತ್ ಅವರ ಬ್ಯಾಗ್ ಅಥವಾ ಟ್ರಕ್ ನಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.