International

ರಾನಿಲ್‌ ವಿಕ್ರಮ ಸಿಂಘೆ; ಒಂದು ಸೀಟೂ ಗೆದ್ದಿಲ್ಲ, ಆದ್ರೂ ಶ್ರೀಲಂಕಾ ಪ್ರಧಾನಿಯಾಗಿದ್ದು ಹೇಗೆ..?

ಕೊಲಂಬೋ; ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ರಾನಿಲ್‌ ವಿಕ್ರಮ ಸಿಂಘೆ ಶ್ರೀಲಂಕಾವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಿನ್ನೆ ಅವರು ಶ್ರೀಲಂಕಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಭಾರತದೊಂದಿಗೆ ಉತ್ತಮ ಸಂಬಂಧ ನಿರೀಕ್ಷಿಸಿರುವುದಾಗಿ ಅವರು ನಿನ್ನೆ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಈಗ ಆರ್ಥಿಕ ತುರ್ತು ಪರಿಸ್ಥಿತಿ ಏರ್ಪಟ್ಟಿದೆ. ಹೀಗಾಗಿ ಶ್ರೀಲಂಕಾ ಆರ್ಥಿಕವಾಗಿ ಚೇತರಿಸಿಕೊಳ್ಳಬೇಕಾದರೆ, ಹರಸಾಹಸವೇ ಮಾಡಬೇಕಾಗುತ್ತದೆ. ಅದನ್ನು ರಾನಿಲ್‌ ವಿಕ್ರಮ ಸಿಂಘೆ ಹೇಗೆ ನಿಭಾಯಿಸುತ್ತಾರೋ ನೋಡಬೇಕು.

   ಅಂದಹಾಗೆ ಕಳೆದ ಚುನಾವಣೆವನ್ನು ರಾನಿಲ್‌ ವಿಕ್ರಮ ಸಿಂಘೆ ನೇತೃತ್ವದ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಹೀನಾಯವಾಗಿ ಸೋತಿತ್ತು. ಒಂದೇ ಒಂದು ಸೀಟು ಕೂಡಾ ಗೆದ್ದಿರಲಿಲ್ಲ. ಅಂತ ಪಾರ್ಟಿಯ ನಾಯಕ ರಾನಿಲ್‌ ವಿಕ್ರಮ ಸಿಂಘೆ ಈಗ ಅನಿವಾರ್ಯ ಕಾರಣಗಳಿಗಾಗಿ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಹಾಗಾದರೆ ರಾನಿಲ್‌ ವಿಕ್ರಮ ಸಿಂಘೆ ಹಾಗೂ ಅವರ ಪಾರ್ಟಿ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

   ಕಳೆದ ಶ್ರೀಲಂಕಾ ಸಂಸತ್‌ ಚುನಾವಣೆಯಲ್ಲಿ ರಾನಿಲ್‌ ವಿಕ್ರಮ ಸಿಂಘೆ ನೇತೃತ್ವದ ನ್ಯಾಷನಲ್‌ ಪಾರ್ಟಿ ನೇರವಾಗಿ ಒಂದು ಸೀಟು ಕೂಡಾ ಗೆದ್ದರಲಿಲ್ಲ. ಆದರೆ ಶ್ರೀಲಂಕಾ ರಾಷ್ಟ್ರೀಯ ಪಾರ್ಲಿಮೆಂಟರಿ ಸದಸ್ಯತ್ವದ ಮೂಲಕ ಅಂದರೆ ಚುನಾವಣೆಯಲ್ಲಿ ಆ ಪಾರ್ಟಿ ಪಡೆದ ಒಟ್ಟು ಶೇಕಡಾವಾರು ಮತಗಳ ಆಧಾರದ ಮೇಲೆ ಒಂದು ಸೀಟು ಲಭಿಸಿತ್ತು. ಆ ಸ್ಥಾನದಲ್ಲಿ ನಿನ್ನೆ ಪ್ರಧಾನಿ ಹುದ್ದೆಗೇರಿರುವ ರಾನಿಲ್‌ ವಿಕ್ರಮ ಸಿಂಘೆ ಕೂತಿದ್ದರು.

      1949  ಮಾರ್ಚ್‌ 24ರಂದು ರಾನಿಲ್‌ ಜನಿಸಿದರು. ನಳಿನಿ ವಿಕ್ರಮ ಸಿಂಘೆ, ಎಸ್ಮಾಂಡ್‌ ವಿಕ್ರಮ ಸಿಂಘೆ ದಂಪತಿಯ ಪುತ್ರನೇ ರಾನಿಲ್‌. ಕೊಲಂಬೋದಲ್ಲಿನ ರಾಯಲ್‌ ಕಾಲೇಜಿನಲ್ಲಿ ಅಂಡರ್‌ ಗ್ರಾಜುಯೇಷನ್‌, ಕೊಲಂಬೋ ಯೂನಿವರ್ಸಿಟಿಯಲ್ಲಿ ಪಿಜಿ ಓದಿದರು. ವಕೀಲರಾಗಿ ಕೆಲಸ ಪ್ರಾರಂಭಿಸಿದ ರಾನಿಲ್‌ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು.

ರಾಜಕೀಯ ಜೀವನ

      ವಿಕ್ರಮ ಸಿಂಘೆ ತನ್ನ ರಾಜಕೀಯ ಜೀವನವನ್ನು ಗಂಪಾಹ ಜಿಲ್ಲೆಯಿಂದ ಶುರು ಮಾಡಿದರು. 1970ರಲ್ಲಿ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಕೆಲಾನಿಯಾ, ಬಿಯಾಗಾಮಾ ಕ್ಷೇತ್ರಗಳಲ್ಲಿ ಪ್ರಿನ್ಸಿಪಲ್‌ ಆರ್ಗನೈಸರ್‌ ಆಗಿ ನೇಮಕವಾಗಿದ್ದರು. ಬಿಯಾಗಾಮಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಅವರು, ಜೆಆರ್‌ ಜಯವರ್ದನೆ ಕ್ಯಾಬಿನೆಟ್‌ನಲ್ಲಿ ಮಂತ್ರಿ ಪದವಿ ದಕ್ಕಿಸಿಕೊಂಡರು. ಉದ್ಯೋಗ ಹಾಗೂ ಯುವಜನ ಸೇವಾ ಮಂತ್ರಿಯಾಗಿ ಕೆಲಸ ಮಾಡಿದರು. ಇದರಿಂದಾಗಿಯೇ ಅವರು ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಪ್ರಮುಖ ನಾಯಕರಾಗಿ ಬೆಳೆದರು.

    1993 ಮೇ 1ರಂದು ನಡೆದ ಎಲ್‌ಟಿಟಿಇ ಆತ್ಮಾಹುತಿ ದಾಳಿಯಲ್ಲಿ ಅಂದಿನ ಅಧ್ಯಕ್ಷ ರಣಸಿಂಘೆ ಸಾವನ್ನಪ್ಪುತ್ತಾರೆ. ಇದರಿಂದಾಗಿ ಡಿ.ಬಿ.ವಿಜೇತುಂಗಾ ನೇತೃತ್ವದಲ್ಲಿ ತಾತ್ಕಾಲಿಕ ಸರ್ಕಾರ ರಚನೆ ಮಾಡಲಾಯಿತು. ಆಗ ರಾನಿಲ್‌ ವಿಕ್ರಮ ಸಿಂಘೆ ಪ್ರಧಾನಮಂತ್ರಿಯಾಗಿ ನೇಮಕವಾದರು. ಅನಂತರ 2001ರಲ್ಲಿ ಅವರು ಎರಡನೇ ಬಾರಿ ಶ್ರೀಲಂಕಾ ಪ್ರಧಾನಮಂತ್ರಿಯಾದರು.

   2015ರ ಜನವರಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ರಾನಿಲ್‌-ಮೈತ್ರಿಪಾಲ ಒಕ್ಕೂಟ ಜಯ ಸಾಧಿಸಿದ್ದರಿಂದ ಮೂರನೇ ಬಾರಿ ರಾನಿಲ್‌ ಪ್ರಧಾನಿಯಾದರು. ಅಧೆ ವರ್ಷ ಶ್ರೀಲಂಕಾ ಪಾರ್ಲಿಮೆಂಟ್‌ ರದ್ದಾಗುತ್ತದೆ. ನಂತರ ನಡೆ ಚುನಾವಣೆಯಲ್ಲಿ ರಾನಿಲ್‌ ಗೆದ್ದು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ.

2015-2019ರ ಸಮಯ ಗುಡ್‌ ಗವರ್ನೆನ್ಸ್‌ ಸಮಯ

       2015-2019ರ ಕಾಲವನ್ನು ಗುಡ್‌ ಗವರ್ನೆನ್ಸ್‌ ಸಮಯ ಎಂದು ಕರೆಯುತ್ತಾರೆ. ಅದೇ ಸಮಯದಲ್ಲಿ ತಲೆ ಎತ್ತಿದ ರಾಜಕೀಯ ತಿಕ್ಕಾಟದ ಕಾರಣದಿಂದ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ತನ್ನ ಅಧಿಕಾರವನ್ನು ಬಳಸಿ ರಾನಿಲ್‌ ವಿಕ್ರಮ ಸಿಂಘೆ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆಯನ್ನು ಪ್ರಧಾನಮಂತ್ರಿಯಾಗಿ ನೇಮಿಸುತ್ತಾರೆ. ಆದ್ರೆ, ಹೈಕೋರ್ಟ್‌ ತೀರ್ಪು ಇದಕ್ಕೆ ವಿರುದ್ಧವಾಗಿ ಬಂದಿದ್ದರಿಂದ ರಾನಿಲ್‌ ಐದನೇ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ.

Share Post