ಉಕ್ರೇನ್ -ರಷ್ಯಾ ಯುದ್ಧ ಬಿಕ್ಕಟ್ಟು: ಮಾತುಕತೆಯೇ ಸಮಸ್ಯೆಗೆ ಪರಿಹಾರ ಎಂದ ಚೀನಾ
ಚೀನಾ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ವಿಶ್ವದ ರಾಷ್ಟ್ರಗಳು ಒಂದೊಂದಾಗಿ ಪ್ರತಿಕ್ರಿಯಿಸುತ್ತಿವೆ. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಿ, ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಿ ಮತ್ತು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಭಾರತ ಸೇರಿದಂತೆ ವಿವಿಧ ದೇಶಗಳು ರಷ್ಯಾಗೆ ಸೂಚನೆ ನೀಡಿವೆ. ಅಮೆರಿಕಾ ಕೂಡ ನ್ಯಾಟೋ ರಾಷ್ಟ್ರಗಳ ಜತೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈಗ ವಿಶ್ವದ ಅಗ್ರಮಾನ್ಯ ರಾಷ್ಟ್ರದಲ್ಲಿ ಒಂದಾದ ಚೀನಾ ಕೂಡ ಯುದ್ಧ ಬೇಡ ಎಂಬ ಹೇಳಿಕೆ ನೀಡಿ ಆಶ್ಚರ್ಯವನದನು ಹುಟ್ಟುಹಾಕಿದೆ.
ರಷ್ಯಾ ಮತ್ತು ಉಕ್ರೇನ್ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆಗೆ ಮುಂದಾಗಬೇಕು ಎಂದು ಚೀನಾ ಅಭಿಪ್ರಾಯಪಟ್ಟಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಈ ಕುರಿತು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ ಜಿನ್‌ಪಿಂಗ್, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸಲು ಸಿದ್ಧ ಎಂದು ಘೋಷಿಸಿದ್ರು.
ಚೀನಾ ಅಧ್ಯಕ್ಷ ಜಿನ್ ಪಿಂಗ್ ಶುಕ್ರವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿದ್ರು ಎನ್ನಲಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಜಿನ್‌ಪಿಂಗ್ ಅವರು ಪುಟಿನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪುಟಿನ್ ಅವರಿಗೆ ಸಲಹೆ ನೀಡಿದ್ರಂತೆ ಜಿನ್‌ಪಿಂಗ್
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದೆ ಎಂಬ ಮಾಧ್ಯಮಗಳ ಹೇಳಿಕೆಯನ್ನು ಚೀನಾ ತಳ್ಳಿಹಾಕಿರುವ ಸಂಗತಿ ಗೊತ್ತೇ ಇದೆ. ಇದನ್ನು ಆಕ್ರಮಣ ಎಂದು ಕರೆಯಬಾರದು ಎಂದು ಪರೋಕ್ಷವಾಗಿ ದಾಳಿಯನ್ನು ಸಪೋರ್ಟ್ ಮಾಡಿದ್ದ ಚೀನಾ ಇದೀಗ ಮಾತುಕತೆ ನಡೆಸಿ ಎಂದು ಹೇಳಿರುವ ವಿಚಾರ ಜಗತ್ತಿಗೆ ಆಶ್ಚರ್ಯವನ್ನುಂಟುಮಾಡಿದೆ.