International

ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಕಷ್ಟ; ಅಧ್ಯಕ್ಷರ ಮನೆಗೆ ನುಗ್ಗಿದ ಶ್ರೀಲಂಕಾ ಜನ

ಕೊಲಂಬೋ; ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಶ್ರೀಲಂಕಾದಲ್ಲಿ ಜನರು ಅವಶ್ಯಕ ವಸ್ತುಗಳೂ ಸಿಗದೇ ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನ ರೊಚ್ಚಿಗೆದ್ದಿದ್ದು, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ.

   ಪ್ರತಿಭಟನಾಕಾರರು ಪೊಲೀಸರ ಭದ್ರತೆಯನ್ನೂ ಭೇಧಿಸಿ, ಬ್ಯಾರಿಕೇಡ್ ಗಳನ್ನು ದಾಟಿ ಅಧ್ಯಕ್ಷರ ನಿವಾಸವನ್ನು ಪ್ರವೇಶಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಆದ್ರೆ ಅಧ್ಯಕ್ಷ ರಾಜಪಕ್ಸೆ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಅವರು ಈಗ ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ ಎಂದು ವರದಿಗಳು ಹೇಳುತ್ತಿವೆ.‌

ಕೆಲವು ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸದ ಮುಖ್ಯ ದ್ವಾರವನ್ನು ಹತ್ತಿ ಒಳ ಪ್ರವೇಶಿಸಿದರು.ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಿಭಟನಾಕಾರರು ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರವೇಶಿಸಲು ಪ್ರಾರಂಭಿಸಿದರು. ಕೆಲವು ಪ್ರತಿಭಟನಾಕಾರರು ಮುಖ್ಯ ದ್ವಾರವನ್ನು ಹತ್ತಿ ಆವರಣವನ್ನು ಪ್ರವೇಶಿಸಿದರು. ಇದೇ ವೇಳೆ ಪ್ರತಿಭಟನಾಕಾರರು, ಅಧ್ಯಕ್ಷರ ಮನೆಯಲ್ಲಿದ್ದ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಆಟವನ್ನೂ ಆಡಿದ್ದಾರೆ.

ಸದ್ಯ ಪ್ರತಿಭಟನಾಕಾರರನ್ನು ತಡೆಯಲು ಸೇನೆಯನ್ನು ನಿಯೋಜಿಸಲಾಗಿದೆ. ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಕೊರತೆಯ ವಿರುದ್ಧ ಶ್ರೀಲಂಕಾದಲ್ಲಿ ದೀರ್ಘಕಾಲದಿಂದ ಪ್ರತಿಭಟನೆಗಳು ನಡೆಯುತ್ತಿವೆ. ಬೀದಿಗಿಳಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು.

Share Post