ಕೆನಡಾ ಪಾರ್ಲಿಮೆಂಟ್ನಲ್ಲಿ ಸಂಸದನ ಕನ್ನಡ ಭಾಷಣ
ಕೆನಡಾ; ಕೆನಡಾ ಸಂಸತ್ತಿನಲ್ಲಿ ಕೂಡ ಕನ್ನಡದ ಕಂಪು ಪಸರಿಸಿದೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ಅಲ್ಲಿನ ಸಂಸತ್ನಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್ನಲ್ಲಿ ಭಾಷಣ ಮಾಡಿದರು. ಬೇರೆ ದೇಶದ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಈ ಸುಂದರ ಭಾಷೆ ಸುದೀರ್ಘ ಇತಿಹಾಸ ಹೊಂದಿದೆ. ಕನ್ನಡ ಭಾಷೆಯನ್ನು 5 ಕೋಟಿ ಜನರು ಮಾತನಾಡುತ್ತಾರೆ’ ಎಂದು ಹೇಳುವ ಮೂಲಕ ಅವರು ಭಾಷಾಭಿಮಾನ ಮೆರೆದರು. ನಂತರ ಕುವೆಂಪು ರಚನೆಯ ಮತ್ತು ಡಾ.ರಾಜಕುಮಾರ್ ಹಾಡಿರುವ ಭಾವಗೀತೆಯಾದ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಹೇಳುವ ಮೂಲಕ ತಮ್ಮ ಭಾಷಣ ಮುಗಿಸಿದರು.