ಮದುವೆಯಾಗುವುದಾಗಿ ನಂಬಿಸಿ ವಂಚನೆ; ಪೊಲೀಸ್ ಪೇದೆ ವಿರುದ್ಧ ದೂರು
ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಪೋಲಿಸ್ ಪೇದೆಯೊಬ್ಬ ವಿವಾಹಿತ ಮಹಿಳೆಗೆ ಮೋಸ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ. ಈಗಾಗಲೇ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟಿದ್ದನೆಂದು ತಿಳಿದುಬಂದಿದೆ. ಈ ಬಗ್ಗೆ ನಂಜನಗೂಡು ಪೊಲೀಸ್ ಠಾಣೆಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೌರಮ್ಮ ಎಂಬವವರೇ ಮೋಸ ಹೋದ ಮಹಿಳೆ. ಕೌಟುಂಬಿಕ ಸಮಸ್ಯೆ ಎದುರಾದಾಗ ಈಕೆ ಬನ್ನೂರು ಪೋಲಿಸ್ ಸ್ಟೇಷನ್ ಗೆ ಹೋಗಿದ್ದಳು. ಆಗ ಅಲ್ಲೆ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ಪೇದೆ ಕೃಷ್ಣ ಎಂಬಾತ ಸಹಾಯ ಮಾಡುವ ನೆಪದಲ್ಲಿ ಈಕೆಯ ಪರಿಚಯ ಮಾಡಿಕೊಂಡಿದ್ದಾನೆ. ತರುವಾಯ ನಿನ್ನ ಗಂಡನಿಗೆ ಡಿವೋರ್ಸ್ ಕೊಡು ನಿನಗೆ ನಾನು ಬಾಳು ಕೊಡುತ್ತೇನೆ ಎಂದು ನಂಬಿಸಿದ್ದಾನೆ. ಇವನ ಬೆಣ್ಣೆ ಮಾತಿಗೆ ಮರಳಾಗಿ ಗೌರಮ್ಮ ಪತಿಗೆ ಡಿವೋರ್ಸ್ ಕೊಟ್ಟಿದ್ದಳು. ಆದರೆ ಇದೀಗ ಮದುವೆಯಾಗದೇ ಸತಾಯಿಸಿದ್ದಾನೆ. ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೃಷ್ಣ ಮೈಸೂರಿನ ಗೋಕುಲಂನಲ್ಲಿ ಮನೆ ಮಾಡಿ ಗೌರಮ್ಮನ ಜೊತೆ ಸಂಸಾರ ಮಾಡುತ್ತಿದ್ದನು. ಗೌರಮ್ಮ ಗರ್ಭಿಣಿಯಾದಾಗ ಬಲವಂತದಿಂದ ಗರ್ಭಪಾತ ಮಾಡಿಸಿದ್ದಾನೆ. ಈ ನಡುವೆ ಗೌರಮ್ಮನ ಹೆಸರಿನಲ್ಲಿ 8 ಲಕ್ಷ ಸಾಲ ಕೂಡ ಪಡೆದಿದ್ದಾನೆ. ಮದುವೆ ಆಗುವಂತೆ ಪೀಡಿಸಿದಾಗ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ.