Bengaluru

ಡಬಲ್‌ ಎಂಜಿನ್‌ ಸರ್ಕಾರದಿಂದ ಏನೂ ಆಗುತ್ತಿಲ್ಲ, ಅದಕ್ಕೆ ನಾವು ಫೀಲ್ಡಿಗಿಳಿದಿದ್ದೇವೆ-ರಾಮಲಿಂಗಾರೆಡ್ಡಿ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ, ಜನರ ಸೇವೆ ಅಂತೂ ಇಲ್ಲವೇ ಇಲ್ಲ ಹಅಗಾಗಿ ಜನರಿಗೆ ನೀರಿನ ಬವಣೆ ನೀಗಿಸಲು ಕಾಂಗ್ರೆಸ್‌ ಸತತ ಪ್ರಯತ್ನ ಮಾಡ್ತಿದೆ ಎಂದು  ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗಾರೆಡ್ಡಿಯವರು ತಿಳಿಸಿದ್ದಾರೆ.

ನಗರದಲ್ಲಿರುವ  ಒಂದೂವರೆ ಕೋಟಿ ಜನರ ಪೈಕಿ ಕೇವಲ ಶೇ.30-40ರಷ್ಟು ಜನರಿಗೆ ಮಾತ್ರ ಕಾವೇರಿ ನೀರು ಕುಡಿಯಲು ಸಿಗುತ್ತಿದೆ. ಉಳಿದ ಶೇ.60-70 ರಷ್ಟು ಜನರಿಗೆ ಕುಡಿಯಲು ಕಾವೇರಿ ನೀರು ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಅದು ಈಗ ಪೂರ್ಣಗೊಳ್ಳುವ ಹಂತದಲ್ಲಿದೆ.  ಇದರ ಜೊತೆಗೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗೆ ಮೇಕೆದಾಟು ಯೋಜನೆ ಅಗತ್ಯ.

ಈ ಯೋಜನೆಯಿಂದ 2.5 ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಹಾಗೆಯೇ ಈ ಯೋಜನೆಯಿಂದ 400 ಮೇ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆಯ ಡಿಪಿಆರ್ ಸಲ್ಲಿಕೆ ಮಾಡಲಾಗಿದ್ದು ಅನುಮತಿ ಪಡೆಯಲಾಗಿತ್ತು. ನಂತರ ಬಂದ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ಆಸಕ್ತಿ ತೋರುತ್ತಿಲ್ಲ.

ಫೆ. 27-28ರಂದು ರಾಮನಗರ ಜಿಲ್ಲೆಯಿಂದ ಆ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ. ಈ ಮೊದಲು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಕೇವಲ 3 ದಿನಕ್ಕೆ ಇಳಿಸಲಾಗಿದೆ. ಕೆಂಗೇರಿಯಿಂದ ನಾಯಂಡನಹಳ್ಳಿ, ಬನಶಂಕರಿ ದೇವಸ್ಥಾನ, ಜಯದೇವ ಆಸ್ಪತ್ರೆ, ಬಿಟಿಎಂ, ಕೋರಮಂಗಲ, ವಿವೇಕನಗರ, ಹಲಸೂರು, ಜೆಸಿ ಪಾಳ್ಯ, ಟಿವಿ ಟವರ್ ಮೂಲಕ ಅರಮನೆ ಮೈದಾನದವರೆಗೆ. ನಂತರ ಸ್ಯಾಕಿ ಟ್ಯಾಂಕ್, ಮಲ್ಲೇಶ್ವರಂ, ಶೇಷಾದ್ರಿಪುರಂ, ರೈಲ್ವೆ ನಿಲ್ದಾಣ, ಚಾಮರಾಜಪೇಟೆ, ಅಲ್ಲಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಲಿದೆ.

ಪಾದಯಾತ್ರೆ ಮಾರ್ಗ ಬದಲಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ನಾವು ಬೆಂಗಳೂರಿನಲ್ಲಿ 5 ದಿನ ಪಾದಯಾತ್ರೆ ಮಾಡುತ್ತಿರುವ ಹಿನ್ನೆಲೆಯಲ್ಲಿ 5 ದಿನ ಹೊರ ವರ್ತುಲ ರಸ್ತೆ ಮಾರ್ಗವನ್ನು ಗುರುತಿಸಿದ್ದೆವು. ಆದರೆ ಈಗ 3 ದಿನ ಮಾಡುತ್ತಿರುವುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ’ ಎಂದು ಉತ್ತರಿಸಿದರು.

ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ಮೂರು ದಿನ ಸಂಚಾರ ದಟ್ಟಣೆ ಕಿರಿಕಿರಿ ಉಂಟಾಗುತ್ತದೆ. ನಾವು ಮುಂದಿನ 25ರಿಂದ 50 ವರ್ಷಗಳ ಕಾಲ ಕುಡಿಯುವ ನೀರಿನ ಬವಣೆ ನೀಗಿಸುವ ಯೋಜನೆ ಜಾರಿಗೆ ಆಹ್ರಹಿಸಿ ಸದುದ್ದೇಶದ ಹೋರಾಟ ಮಾಡುತ್ತಿದ್ದು, ಸಾರ್ವಜನಿಕರು ಮೂರು ದಿನಗಳ ಕಾಲ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.

Share Post