International

ಉಕ್ರೇನ್‌-ರಷ್ಯಾ ನಡುವೆ ಯುದ್ಧ; ಸಂಧಾನಕಾರರಿಗೆ ವಿಷಪ್ರಾಷಣ ಶಂಕೆ

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಸದ್ಯದಲ್ಲಿ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಸಂಧಾನ ಮಾತುಕತೆಗಳು ಮುಂದುವರೆದಿವೆ. ಇವತ್ತೂ ಕೂಡಾ ಸಂಧಾನ ಮಾತುಕತೆ ಇದೆ. ಈ ನಡುವೆ, ಸಂಧಾನಕಾರರಿಗೆ ವಿಷಪ್ರಾಶಣ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ರಷ್ಯಾ ಉದ್ಯಮಿ ರೋಮನ್ ಅಬ್ರಮೊವಿಚ್ ಮತ್ತು ಉಕ್ರೇನ್ ಶಾಂತಿ ಸಂಧಾನಕಾರರಿಗೆ ವಿಷ ಪ್ರಾಷಣವಾಗಿದೆ ಎಂದು ಶಂಕಿಸಲಾಗಿದೆ. ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಮಾರ್ಚ್‌ ಆರಂಭದಲ್ಲಿ ಸಂಧಾನ ಸಭೆ ನಡೆದಿತ್ತು. ಇದರ ಬಳಿಕ ಅವರಲ್ಲಿ ವಿಷ ಪ್ರಾಷನದ ಲಕ್ಷಣಗಳು ಗೋಚರಿಸಿವೆ ಎಂದು ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ. ಯುದ್ಧ ನಿಲ್ಲಿಸುವಂತೆ ಉಕ್ರೇನ್‌ ಮಾಡಿದ್ದ ಮನವಿಗೆ ಒಪ್ಪಿದ್ದ ಅಬ್ರಮೊವಿಚ್ ಮತ್ತು ಉಕ್ರೇನ್‌ ತಂಡದ ಇನ್ನಿಬ್ಬರು ಹಿರಿಯ ಸದಸ್ಯರಲ್ಲಿ ವಿಷ ಪ್ರಾಷಣದ ಲಕ್ಷಣಗಳು ಗೋಚರಿಸಿವೆ ಎಂಬ ಅಂಶ ಈ ವರದಿಯಲ್ಲಿದೆ.

ರಷ್ಯಾ ನಿಯೋಗದೊಂದಿಗೆ ಸಂಧಾನ ನಡೆಸಿದ್ದ ಅಬ್ರಾಮೊವಿಕ್ ಮತ್ತು ಇತರ ಉಕ್ರೇನ್ ಪ್ರತಿನಿಧಿಗಳಲ್ಲಿ ಚರ್ಮದ ಉರಿ, ಕುರುಡುತನ, ಕಣ್ಣು ಕೆಂಪಾಗುವುದು, ಮತ್ತು ತಲೆನೋವಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ವಿಷಪ್ರಾಶನವೇ ಇದಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ವಿಷ ಉಣಿಸಲು ಕಾರಣವೇನು ? ಇದರಲ್ಲಿ ಪಾಲ್ಗೊಂಡಿದ್ದವರು ಯಾರು? ಯಾವ ರೀತಿಯ ವಿಷವನ್ನು ಪ್ರಯೋಗಿಸಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

Share Post