HistoryNational

ರಾಷ್ಟ್ರಗೀತೆಗೂ ಆಂಧ್ರದ ಮದನಪಲ್ಲಿಗೂ ಎತ್ತನಿಂದೆತ್ತ ಸಂಬಂಧ..?

ಭಾರತದ ರಾಷ್ಟ್ರಗೀತೆ ʻಜನಗಣಮನʼವನ್ನು ವಿಶ್ವಕವಿ ರವೀಂದ್ರನಾಥ್‌ ಠಾಗೂರ್‌ ೧೯೧೧ರಲ್ಲೇ ಬರೆದಿದ್ದರು. ಅದೇ ವರ್ಷ ಡಿಸೆಂಬರ್‌ ೨೭ರಂದು ಕೋಲ್ಕತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಸಮಾವೇಶದಲ್ಲಿ ಕೂಡಾ ಅದನ್ನು ಹಾಡಲಾಗಿತ್ತು. ಅನಂತರ ಕೂಡಾ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಈ ಗೀತೆಯನ್ನು ಲಕ್ಷಾಂತರ ಬಾರಿ ಅನೇಕ ವೇದಿಕೆಗಳಲ್ಲಿ ಹಾಡಲಾಗಿತ್ತು. ಆದರೆ ನೀವು ಈಗ ಕೇಳುತ್ತಿರುವ ಟ್ಯೂನ್‌ನಲ್ಲಿ ಅಲ್ಲವೇ ಅಲ್ಲ. ಅವರಿಗೆ ತೋಚಿದ ರಾಗದಲ್ಲಿ ಅವರು ಹಾಡುತ್ತಿದ್ದರು.

ಆದರೆ, ರಾಷ್ಟ್ರಗೀತೆಗೊಂದು ಸ್ವರವನ್ನು ರಚಿಸಲಾಯಿತು. ಅದನ್ನು ರಚಿಸಿದ್ದು ಐರಿಷ್‌ ರಾಷ್ಟ್ರದ ಮಹಿಳೆ.. ಅದೇ ರಾಗದಲ್ಲಿ ಈಗಲೂ ದೇಶ್ಯಾದ್ಯಂತ ರಾಷ್ಟ್ರಗೀತೆಯನ್ನು ಹಾಡುತ್ತಿರುವುದು. ಅಂದರೆ ಈ ರಾಗದಲ್ಲಿ ಮೊದಲ ಬಾರಿಗೆ ರಾಷ್ಟ್ರಗೀತೆಯನ್ನು ವೇದಿಕೆ ಮೇಲೆ ಹಾಡಿದ್ದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿಯಲ್ಲಿ..! ಭಾರತ ಸ್ವಾತಂತ್ರ್ಯ ಹೋರಾಟವನ್ನು ಮತ್ತಷ್ಟು ಬಲಪಡಿಸಿದ ಡಾ.ಅನಿಬೆಸೆಂಟ್‌ ಮದನಪಲ್ಲಿಯಲ್ಲಿ ಥಿಯೋಸಾಫಿಲ್‌ ಕಾಲೇಜು ಸ್ಥಾಪನೆ ಮಾಡಿದರು. ಐರಿಷ್‌ ಪೌರನಾದ ಪ್ರಮುಖ ಶಿಕ್ಷಣ ಉದ್ಯಮಿ ಜೇಮ್ಸ್‌ ಹೆನ್ರಿ ಕಸಿನ್ಸ್‌ ಅದರ ಪ್ರಾಂಶುಪಾಲರಾಗಿದ್ದರು. ಲಂಡನ್‌ ಮ್ಯೂಸಿಕ್‌ ಕಾಲೇಜಿನಲ್ಲಿ ಓದುತ್ತಿದ್ದ ಅವರ ಹೆಂಡತಿ ಮಾರ್ಗರೇಟ್‌ ಕಸಿನ್ಸ್‌ ಅಲ್ಲಿನ ಸಂಗೀತವನ್ನು ಹೇಳಿಕೊಡುತ್ತಿದ್ದರು. ೧೯೧೯ರಲ್ಲಿ ದಕ್ಷಿಣ ಭಾರತದ ಪ್ರವಾಸದಲ್ಲಿರುವಾಗ ರವೀಂದ್ರನಾಥ ಠ್ಯಾಗೂರ್‌ ಸುತ್ತಿ ಸುತ್ತಿ ಸುಸ್ತಾಗಿ ಬೆಂಗಳೂರಿಗೆ ಆಗಮಿಸುತ್ತಾರೆ. ಬೆಂಗಳೂರಿನಲ್ಲಿರುವಾಗಲೇ ಅವರಿಗೆ ಮದನಪಲ್ಲಿಯ ವಾತಾವರಣದ ಬಗ್ಗೆ ತಿಳಿಯುತ್ತದೆ. ಇದರಿಂದಾಗಿ ಅವರು ವಿಶ್ರಾಂತಿಗಾಗಿ ಮದನಪಲ್ಲಿಯಲ್ಲಿರುವ ಥಿಯೋಸಾಫಿಕಲ್‌ ಕಾಲೇಜಿಗೆ ಬರುತ್ತಾರೆ.

ರವೀಂದ್ರನಾಥ್‌ ಠಾಗೂರ್‌ಗೆ ಜೇಮ್ಸ್‌ ಕಜಿನ್ಸ್‌ ಕವಿತೆಗಳೆಂದರೆ ತುಂಬಾ ಇಷ್ಟ.‌ ಠಾಗೂರ್‌ ಮದನಪಲ್ಲಿಯಲ್ಲಿ ವಾಸ್ತವ್ಯ ಹೂಡುವುದಕ್ಕೆ ಇದೇ ಪ್ರಮುಖ ಕಾರಣ. ಪ್ರಶಾಂತ ವಾತಾವರಣ ಇರುವ ಥಿಯೋಸಾಫಿಕಲ್‌ ಕಾಲೇಜಿನಲ್ಲಿ ಪ್ರತಿ ಬುಧವಾರ ಡಿನ್ನರ್‌ ನಂತರ ವಿದ್ಯಾರ್ಥಿಗಳೆಲ್ಲಾ ಸೇರಿ ಹಾಡುಗಳನ್ನು ಹಾಡುತ್ತಿದ್ದರು. ಆ ಸಮಯದಲ್ಲಿ ಅಲ್ಲಿಯೇ ಇದ್ದ ಠಾಗೂರ್‌, ಅಂತಹ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಸ್ವಂತವಾಗಿ ತಮ್ಮ ಕಂಠದಲ್ಲಿ ಜನಗಣಮನ ಗೀತೆ ಹಾಡುತ್ತಾರೆ. ಠಾಗೂರ್‌ ಹಾಡುತ್ತಿದ್ದಂತೆ ವಿದ್ಯಾರ್ಥಿಗಳು ಕೂಡಾ ಇದಕ್ಕೆ ದನಿಗೂಡಿಸುತ್ತಾರೆ. ಅದೇ ಸಮಯದಲ್ಲಿ ಮಾರ್ಗರೇಟ್‌ ಕಸಿನ್ಸ್‌ ಕೂಡಾ ಅಲ್ಲಿದ್ದರು. ಆ ಹಾಡಿನಲ್ಲಿನ ದೇಶಭಕ್ತಿಯನ್ನು, ರಾಷ್ಟ್ರೀಯ ಭಾವನೆಯನ್ನು ಗಮನಿಸುತ್ತಾರೆ. ಆದರೆ, ಜನಗಣಮನಕ್ಕೆ ಇನ್ನೂ ಯಾರೂ ರಾಗಯುಕ್ತವಾಗಿ ಹಾಡಿವೆಂದು ತಿಳಿದ ಅವರು, ತಾವೇ ಅದನ್ನು ಸ್ವರಬದ್ಧವಾಗಿ ಹಾಡಲು ತೀರ್ಮಾನಿಸುತ್ತಾರೆ. ಅದರ ಮರುದಿನ ಆಕೆ, ಠಾಗೂರ್‌ ಅವರನ್ನು ಭೇಟಿ ಮಾಡಿ, ಜನಗಣಮನಕ್ಕೆ ಸ್ವರ ರಚಿಸಬೇಕೆಂದುಕೊಂಡಿದ್ದೇನೆ. ಅದಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡುತ್ತಾರೆ. ಇದಕ್ಕೆ ಅನುಮತಿ ನೀಡಿದ ಠಾಗೂರ್‌, ಆಕೆಗೆ ಜನಗಣಮನ ಗೀತೆಯ ಅರ್ಥವನ್ನು ವಿವರವಾಗಿ ಹೇಳುತ್ತಾರೆ. ಅದಕ್ಕೆ ಸ್ವರ ಹೇಗಿದ್ದರೆ ಚೆನ್ನಾಗಿರುತ್ತೆ ಎಂಬುದನ್ನೂ ವಿವರಿಸುತ್ತಾರೆ. ಅನಂತರ ಮಾರ್ಗರೇಟ್‌ ಕಸಿನ್ಸ್‌ ತನ್ನ ವಿದ್ಯಾರ್ಥಿಗಳ ಸಹಾಯದಿಂದ ಪ್ರತಿಯೊಂದು ಪದಕ್ಕೂ ಅರ್ಥ ತಿಳಿಯುತ್ತಾ ಅದಕ್ಕೆ ರಾಗಸಂಯೋಜನೆ ಮಾಡುತ್ತಾರೆ. ಅನಂತರ ಠಾಗೂರ್‌ ಅವರಿಗೆ ಸಂಯೋಜಿಸಿದ ರಾಗವನ್ನು ಕೇಳಿಸುತ್ತಾರೆ. ಕೆಲವು ಸಣ್ಣ ಸಣ್ಣ ಸಂಗೀತ ಪರಿಕರಗಳ ಮೂಲಕ ವಿದ್ಯಾರ್ಥಿಗಳು ರಾಗವಾಗಿ ಹಾಡಿದ ಜನಗಣಮನ ಗೀತೆಯನ್ನು ಕೇಳಿದ ಠಾಗೂರ್‌ ಆಕೆಯನ್ನು ಖುಷಿಯಿಂದ ಅಭಿನಂದಿಸುತ್ತಾರೆ. ಹಾಗೆ ಪಶ್ಚಿಮಬಂಗಾಳದಲ್ಲಿ ಹುಟ್ಟಿದ ರಾಷ್ಟ್ರಗೀತೆ ಆಂಧ್ರದ ಮದನಪಲ್ಲಿಯಲ್ಲಿ ರಾಗಸಂಯೋಜನೆಯಾಗುತ್ತದೆ.

ಅನಂತರ ೧೯೨೨ರಲ್ಲಿ ಮಾರ್ಗರೇಟ್‌ ಕಸಿನ್ಸ್‌ ಮೊಟ್ಟಮೊದಲ ಮಹಿಳಾ ಮ್ಯಾಜಿಸ್ಟ್ರೇಟ್‌ ಆಗಿ ಕೆಲಸ ಮಾಡುತ್ತಾರೆ. ೧೯೨೭ರಲ್ಲಿ ಸ್ಥಾಪಿಸಿದ ಅಖಿಲ ಭಾರತ ಮಹಿಳಾ ಸಮಾವೇಶಕ್ಕೆ ಆಕೆ ಸಹವ್ಯವಸ್ಥಾಪಕಿಯಾಗುತ್ತಾರೆ. ೧೯೩೬ರವರೆಗೈ ಆಕೆ ಅದರ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಾರೆ.

ಆದರೆ, ವಿಷಯ ಇಲ್ಲಿಗೆ ಮುಗಿಯುವುದಿಲ್ಲ. ರವೀಂದ್ರನಾಥ್‌ ಠಾಗೂರ್‌ ಮದನಪಲ್ಲಿಯಲ್ಲೇ ಜನಗಣಮನವನ್ನು ಇಂಗ್ಲೀಷ್‌ಗೆ ಅನುವಾದ ಮಾಡುತ್ತಾರೆ. ಒಂದು ದಿನ ಬೆಳಗ್ಗೆ ಮದನಪಲ್ಲಿಯ ಥಿಯೋಸಾಫಿಕಲ್‌ ಕಾಲೇಜು ಆವರಣದಲ್ಲಿನ ಒಂದು ಗುಲ್‌ಮೊಹರ್‌ ಗಿಡದ ಕೆಳಗೆ ಕೂತುಕೊಂಡು ಠಾಗೂರ್‌‌ ಜನಗಣಮನವನ್ನು ಇಂಗ್ಲೀಷ್‌ಗೆ ಅನುವಾದ ಮಾಡುತ್ತಾರೆ.
ಅನಂತರ ಅದನ್ನು ತಮ್ಮ ಕೈಗಳಿಂದಲೇ ಬರೆಯುತ್ತಾರೆ. ನಂತರ ಅದರ ಕೆಳಗೆ ಅದರ ಹೆಸರನ್ನು ಮಾರ್ನಿಂಗ್‌ ಸಾಂಗ್‌ ಆಫ್‌ ಇಂಡಿಯಾ ಎಂದು ಬರೆಯುತ್ತಾರೆ. ಅದರ ಕೆಳಗೆ ಫೆಬ್ರವರಿ ೨೮, ೧೯೧೯ ಎಂದು ಬರೆದು ಸಹಿ ಮಾಡಿ, ಮಾರ್ಗರೇಟ್‌ ಕಸಿನ್ಸ್‌ಗೆ ಬಹುಮಾನವಾಗಿ ನೀಡುತ್ತಾರೆ.


ನಂತರದ ದಿನಗಳಲ್ಲಿ ಆ ಕಾಲೇಜಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಆಗ ಠಾಗೂರ್‌ ಬರೆದ ಆ ಪ್ರತಿಯನ್ನು ಮಾರಾಟ ಮಾಡಲಾಗುತ್ತದೆ. ಅಮೆರಿಕದ ಕಲಾಭಿಮಾನಿಯೊಬ್ಬರು ಆ ಪ್ರತಿಯನ್ನು ಖರೀದಿ ಮಾಡುತ್ತಾರೆ. ಅದರ ಒಂದು ಕಾಪಿ ಮದನಪಲ್ಲಿಯ ಥಿಯೋಲಾಜಿಕಲ್‌ ಕಾಲೇಜಿನಲ್ಲಿ ಈಗಲೂ ಇದೆ ಎಂದು ಆ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್‌ ಮಲ್ಲಿಕಾರ್ಜುನ್‌ ರಾವ್‌ ಹೇಳುತ್ತಾರೆ.
ಮದನಪಲ್ಲಿ ಕಾಲೇಜು ಬಿಟ್ಟು ಹೋಗುವ ಮುನ್ನ ರವೀಂದ್ರನಾಥ್‌ ಠಾಗೂರ್‌ ಅದನ್ನು ದಕ್ಷಿಣ ಭಾರತದ ಶಾಂತಿನಿಕೇತನ್‌ ಎಂದು ಕರೆಯುತ್ತಾರೆ. ಅನಂತರ ಜನಗಣಮನವನ್ನು ರಾಷ್ಟ್ರಗೀತೆ ಎಂದು ಘೋಷಿಸಬೇಕೆಂದು ಜೇಮ್ಸ್‌ ಹೆನ್ರಿ ಕಸಿನ್ಸ್‌ ತೀವ್ರವಾಗಿ ಪ್ರಯತ್ನಿಸುತ್ತಾರೆ. ಭಾರತ ೧೯೫೦ ಜನವರಿ ೨೬ರ ಗಣತಂತ್ರ ದೇಶವಾಗಿ ಬದಲಾದ ನಂತರ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಘೋಷಿಸಲಾಯಿತು.

Share Post